ಬೆಂಗಳೂರು: ನಟ ದರ್ಶನ್ ಅಭಿನಯದ ಸೂಪರ್‌ಹಿಟ್ ‘ಕ್ರಾಂತಿ’ ಸಿನಿಮಾದ ‘ಶೇಕ್ ಇಟ್ ಪುಷ್ಪವತಿ’ ಹಾಡಿನ ಮೂಲಕ ಜನಪ್ರಿಯರಾಗಿದ್ದ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದ್ದ ಐಶ್ವರ್ಯಾ ರಂಗರಾಜನ್, ಮಂಗಳೂರು ಮೂಲದ ಸಾಯಿ ಸ್ವರೂಪ್ ಅವರೊಂದಿಗೆ ವೈವಾಹಿಕ ಬಂಧನಕ್ಕೆ ಒಳಗಾಗಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಗಾಯಕಿ ಐಶ್ವರ್ಯಾ ಮತ್ತು ಸಾಯಿ ಸ್ವರೂಪ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಇದೀಗ ಸಂಪ್ರದಾಯಬದ್ಧವಾಗಿ ಇಬ್ಬರೂ ಮದುವೆಯಾಗಿದ್ದು, ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ತಮ್ಮ ವೈವಾಹಿಕ ಜೀವನದ ಸಂಭ್ರಮದ ಫೋಟೋಗಳನ್ನು ಐಶ್ವರ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ನಾನು ನನ್ನ ಆತ್ಮೀಯ ಸ್ನೇಹಿತನನ್ನು ಮದುವೆಯಾದೆ’ ಎಂದು ಅಡಿಬರಹವನ್ನೂ ಅವರು ನೀಡಿದ್ದಾರೆ.
ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ಕನ್ನಡ ಚಿತ್ರರಂಗದ ಹಲವು ದೊಡ್ಡ ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ನೀಡಿದ್ದಾರೆ. ‘ಕ್ರಾಂತಿ’, ‘ಯುಐ’, ‘ಕಬ್ಜ’, ‘ಏಕ್ ಲವ್ ಯಾ’, ‘ಸಲಗ’, ‘ಘೋಸ್ಟ್’, ಮತ್ತು ‘ಕೆಜಿಎಫ್’ ಸೇರಿದಂತೆ ಇನ್ನೂ ಅನೇಕ ಚಿತ್ರಗಳಿಗೆ ಅವರು ಕಂಠದಾನ ಮಾಡಿದ್ದಾರೆ.






