ಬೆಂಗಳೂರು: ಸೀರಿಯಲ್ ನಟಿಯೊಬ್ಬರಿಗೆ ಕಳೆದ ಮೂರು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ (Harassment ) ನೀಡುತ್ತಿದ್ದ ಆರೋಪಿ ನವೀನ್ ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ನಟಿಗೆ ಅಶ್ಲೀಲ ಮೆಸೆಜ್‌ಗಳು ಹಾಗೂ ಗುಪ್ತಾಂಗದ ವೀಡಿಯೊ ಕಳುಹಿಸಿದ್ದ ಆರೋಪಿ ನವೀನ್ (22) ಕೇರಳ ಮೂಲದವನು, ಪ್ರಸ್ತುತ ವೈಟ್‌ಫೀಲ್ಡ್‌ನಲ್ಲಿ ವಾಸಿಸುತ್ತಿದ್ದಾನೆ.
ಮೂರು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ ನವೀನ್, ನಟಿ ಅದನ್ನು ಸ್ವೀಕರಿಸದಿದ್ದಾಗ ಮೆಸೆಂಜರ್ ಮೂಲಕ ಅಶ್ಲೀಲ ಮೆಸೇಜ್‌ಗಳಿಂದ ಕಿರುಕುಳ ನೀಡಲು ಆರಂಭಿಸಿದ್ದ. ನಟಿ ಎಚ್ಚರಿಕೆ ನೀಡಿದರೂ ಕಾಟ ನಿಲ್ಲದ ಹಿನ್ನಲೆ ಬ್ಲಾಕ್ ಮಾಡಿದ್ದರು. ಆದರೂ ಆರೋಪಿ ಬೇರೆ ಬೇರೆ ಐಡಿ ಗಳಿಂದ ಮತ್ತೆ ಅಶ್ಲೀಲ ಮೆಸೇಜ್‌ಗಳು ಮತ್ತು ಖಾಸಗಿ ಅಂಗಾಂಗದ ಚಿತ್ರಗಳು ಕಳಿಸಿ ಕಿರುಕುಳ ನೀಡುತ್ತಿದ್ದ.
ನಟಿಯು ಕೋಪಗೊಂಡು ನವೆಂಬರ್ 1ರಂದು ನಂದನ್ ಪ್ಯಾಲೇಸ್ ಬಳಿ ಆರೋಪಿ ನವೀನ್‌ನ್ನು ಭೇಟಿಯಾಗಿ “ಈ ರೀತಿ ಮೆಸೇಜ್ ಮಾಡಬೇಡ” ಎಂದು ಎಚ್ಚರಿಸಿದರೂ, ಕಿರುಕುಳ ಮುಂದುವರಿದಿತ್ತು.
ಕೊನೆಗೆ ನಟಿಯು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ನವೀನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನವೀನ್ ಖಾಸಗಿ ಕಂಪನಿಯಲ್ಲಿ ಡೆಲಿವರಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.






