ಚಿತ್ರದುರ್ಗ: ಗಂಡ ಮತ್ತು ಮೂವರು ಮಕ್ಕಳನ್ನು ತೊರೆದು ಮಹಿಳೆಯೊಬ್ಬರು ನಾಪತ್ತೆಯಾಗಿರುವ ವಿಚಿತ್ರ ಘಟನೆ ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಮಹಿಳೆ ಪರಪುರುಷನೊಂದಿಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
15 ವರ್ಷಗಳ ಸಂಸಾರಕ್ಕೆ ಕೊಳ್ಳಿ: ಪರಾರಿಯಾದ ಮಹಿಳೆಯನ್ನು ಜೋಡಿಚಿಕ್ಕೇನಹಳ್ಳಿ ಗ್ರಾಮದ ಸಾವಿತ್ರಿ ಎಂದು ಗುರುತಿಸಲಾಗಿದೆ. ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದವರಾದ ಸಾವಿತ್ರಿ ಅವರು, 15 ವರ್ಷಗಳ ಹಿಂದೆ ರಂಗಸ್ವಾಮಿ ಎಂಬವರನ್ನು ವಿವಾಹವಾಗಿದ್ದರು. ರಂಗಸ್ವಾಮಿ ಅವರು ತಮ್ಮ ಮಾವನ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕುಟುಂಬವು ಇಲ್ಲಿನ ತೋಟದ ಮನೆಯಲ್ಲಿ ವಾಸವಿತ್ತು.
ಫೋನ್ ಡೇಟಾ ಡಿಲೀಟ್ ಮಾಡಿ ಎಸ್ಕೇಪ್: ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಸಾವಿತ್ರಿ ಬೆಳಗಾಗುವುದರೊಳಗೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಇತ್ತ, ಸಾವಿತ್ರಿ ತನ್ನ ತವರು ಮನೆಗೆ ಹೋಗಿಲ್ಲ, ಅಥವಾ ಸಂಬಂಧಿಕರ ಮನೆಯಲ್ಲೂ ಇಲ್ಲದಿರುವುದು ಪತಿ ರಂಗಸ್ವಾಮಿ ಅವರಿಗೆ ಆತಂಕವನ್ನುಂಟು ಮಾಡಿದೆ. ಮನೆಯಿಂದ ಹೊರಡುವ ಮುನ್ನ ಸಾವಿತ್ರಿ ಮೊಬೈಲ್‌ನಲ್ಲಿದ್ದ ಎಲ್ಲಾ ಫೋಟೋಗಳು ಮತ್ತು ವಾಟ್ಸಪ್ ಚಾಟ್ ವಿವರಗಳನ್ನು ಅಳಿಸಿ (Delete) ಹಾಕಿರುವ ಕಾರಣ, ಪರಪುರುಷನೊಂದಿಗೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಕುಟುಂಬ ಶಂಕಿಸಿದೆ.
ಮನೆಗೆ ಮರಳುವಂತೆ ಟೆಂಪಲ್ ರನ್: ಪತ್ನಿ ಸಾವಿತ್ರಿ ಮನೆಗೆ ಮರಳಲಿ ಎಂದು ಪತಿ ರಂಗಸ್ವಾಮಿ ಅವರು ಟೆಂಪಲ್ ರನ್ ಆರಂಭಿಸಿದ್ದು, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಅತ್ತ ಸಾವಿತ್ರಿ ಅತ್ತೆ ಜಯಮ್ಮ ಮತ್ತು ಮಾವ ಹನುಮಂತಪ್ಪ ಅವರು ಕೂಡ ಸೊಸೆಯ ಫೋಟೋ ಆಲ್ಬಮ್ ಹಿಡಿದು ಗೋಳಾಡುತ್ತಿದ್ದಾರೆ. ಸಾವಿತ್ರಿ ಅತ್ತೆ ಜಯಮ್ಮ ಮತ್ತು ಮಾವ ಹನುಮಂತಪ್ಪ ಅವರು ಘಟನೆಯ ಬಗ್ಗೆ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ಮಹಿಳೆ ಮತ್ತು ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ.






