ಭಟ್ಕಳ(ಉತ್ತರಕನ್ನಡ): ಬಸ್ ಚಾಲಕನ ಮೂಲಕ ಮುಂಬೈನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಂದು ಕೋಟಿ ರೂಪಾಯಿ ಮೌಲ್ಯದ ಹಣ ಹಾಗೂ ಚಿನ್ನಾಭರಣಗಳನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬಯಿಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಅನ್ನು ಭಟ್ಕಳದಲ್ಲಿ ಸಂಶಯಾಸ್ಪದವಾಗಿ ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಮಾಲೀಕರಿಲ್ಲದೇ ಇದ್ದ ಸೂಟ್‌ಕೇಸ್‌ವೊಂದು ಸಂಶಯಕ್ಕೆ ಕಾರಣವಾಯಿತು. ಸೂಟ್‌ಕೇಸ್ ಅನ್ನು ಪರಿಶೀಲಿಸಿದಾಗ, ಅದರೊಳಗೆ ಬಂಗಾರ ಮತ್ತು ಹಣ ಪತ್ತೆಯಾಗಿದೆ.
ದಾಳಿಯಲ್ಲಿ ಒಟ್ಟೂ 401 ಗ್ರಾಂ ತೂಕದ 32 ಬಂಗಾರದ ಬಳೆಗಳು ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳುಳ್ಳ 50 ಲಕ್ಷ ನಗದು ಹಣ ಪತ್ತೆಯಾಗಿದೆ. ವಶಪಡಿಸಿಕೊಂಡ ಹಣ ಮತ್ತು ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು ಒಂದು ಕೋಟಿ ರೂಪಾಯಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಬಸ್ ಚಾಲಕ, ಮುಂಬೈನಲ್ಲಿ ಒಬ್ಬ ಅನಾಮಿಕ ವ್ಯಕ್ತಿ ತಮ್ಮ ಕೈಗೆ ಈ ಸೂಟ್‌ಕೇಸ್ ನೀಡಿರುವುದಾಗಿ ತಿಳಿಸಿದ್ದಾನೆ. “ಮಂಗಳೂರು ಬಸ್ ನಿಲ್ದಾಣದಲ್ಲಿ ಇರ್ಫಾನ್ ಎಂಬುವವರು ಬಂದು ಇದನ್ನು ತೆಗೆದುಕೊಳ್ಳುತ್ತಾರೆ. ಅವರಿಗೆ ಕೊಡುವಂತೆ ಹೇಳಿದ್ದ ಆ ಅನಾಮಿಕ, ಬಸ್ ಸಂಖ್ಯೆ ಹೇಳಿರ್ತಿನಿ ಅಲ್ಲಿ ನಮ್ಮವರು ಬಂದು ಕಲೆಕ್ಟ್ ಮಾಡ್ತಾರೆ” ಎಂದು ತಿಳಿಸಿದ್ದಾಗಿ ತಿಳಿದುಬಂದಿದೆ.
ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಹಣ ಹಾಗೂ ಒಡವೆಗಳ ಮಾಲಿಕರು ಯಾರು ಮತ್ತು ಇದರ ಅಕ್ರಮ ಸಾಗಾಟದ ಹಿಂದಿನ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.






