ಭಟ್ಕಳ(ಉತ್ತರಕನ್ನಡ): ಮುರ್ಡೇಶ್ವರ ರೈಲ್ವೆ ನಿಲ್ದಾಣದ ಸಮೀಪ ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಯುವಕನೊಬ್ಬನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದ ನಾಲ್ವರು ಮಂಗಳಮುಖಿಯರನ್ನು ಮುರ್ಡೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಅದ್ನಾನ್ ಮೆಹದಿ, ಮೈಸೂರು ಮೂಲದ ಅಜರ್ ಖಾನ್, ಮಹಮದ್ ಉಸ್ಮಾನ್ ಹಾಗೂ ತಮಿಳುನಾಡು ಕೃಷ್ಣಗಿರಿ ಮೂಲದ ಮದನ್ ಪಳನಿ ಬಂಧಿತ ಮಂಗಳಮುಖಿಯರಾಗಿದ್ದಾರೆ.
ಮಾವಳ್ಳಿ ಗುಮ್ಮನಕ್ಕಲ್ ನಿವಾಸಿ ಅರುಣ್ ಕುಮಾರ್ ಭಾಸ್ಕರ ನಾಯ್ಕ ಎಂಬುವರು ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಘಟನೆ ನಡೆದಿದ್ದು ಹೇಗೆ?
ಪೊಲೀಸ್ ಮೂಲಗಳ ಪ್ರಕಾರ, ಅರುಣ್ ಕುಮಾರ್ ಅವರು ತಮ್ಮ ಸ್ಕೂಟರ್‌ನಲ್ಲಿ ಸರ್ವಿಸ್ ರಸ್ತೆಯ ಮೂಲಕ ರೈಲ್ವೆ ನಿಲ್ದಾಣದ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಮಂಗಳಮುಖಿಯರು ಕೈ ಮಾಡಿ ವಾಹನ ನಿಲ್ಲಿಸಿ, ಮಾತನಾಡಲು ಮುಂದಾದರು. ಯುವಕ ವಾಹನ ನಿಲ್ಲಿಸುತ್ತಿದ್ದಂತೆ, ಮತ್ತಿಬ್ಬರು ಮಂಗಳಮುಖಿಯರು ಅಲ್ಲಿಗೆ ಬಂದು ಯುವಕನ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅದೇ ಸಂದರ್ಭದಲ್ಲಿ, ಆರೋಪಿಗಳು ಯುವಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಮುರ್ಡೇಶ್ವರ ರೈಲ್ವೆ ನಿಲ್ದಾಣದ ಕಡೆಗೆ ಓಡಿ ಪರಾರಿಯಾಗಿದ್ದರು.
ಘಟನೆ ನಡೆದ ತಕ್ಷಣ ಮುರ್ಡೇಶ್ವರ ಪಿಎಸ್‌ಐ ಲೋಕನಾಥ ರಾಥೋಡ್ ಅವರ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ, ತೀವ್ರ ಕಾರ್ಯಾಚರಣೆ ಕೈಗೊಂಡರು. ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.






