ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನ ಟೆರೇಸ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯೋರ್ವಳ ಮೃತದೇಹ ಪತ್ತೆಯಾದ ಘಟನೆ ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗಂಗೂರು ಗ್ರಾಮದ ವನಿಷಾ(21) ಮೃತ ದುರ್ದೈವಿ ವಿದ್ಯಾರ್ಥಿನಿಯಾಗಿದ್ದಾಳೆ. ವನಿಷಾ ಇಲ್ಲಿನ ಡಿವಿಎಸ್ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಓದುತ್ತಿದ್ದಳು ಎನ್ನಲಾಗಿದೆ.
ಟೆರೇಸ್ ಮೇಲಿನ ನೀರಿನ ಟ್ಯಾಂಕ್ ಪಕ್ಕದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ವನಿಷಾ ಮೃತದೇಹ ಪತ್ತೆಯಾಗಿದೆ. ಟೆರೇಸ್ ಮೇಲೆ ತೆರಳಿದ್ದ ವೇಳೆ ಮೃತ ಸ್ಥಿತಿಯಲ್ಲಿ ವನಿಷಾಳನ್ನು ಗಮನಿಸಿದ ಹಾಸ್ಟೆಲ್‌ನ ಇತರೆ ವಿದ್ಯಾರ್ಥಿನಿಯರು ಭಯಗೊಂಡು ವಾರ್ಡನ್‌ಗೆ ಮಾಹಿತಿ ನೀಡಿದ್ದು ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಕೋಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕುರಿತು ತನಿಖೆ ಕೈಗೊಂಡಿದ್ದಾರೆ.






