ಬೆಂಗಳೂರಿನ ಉತ್ತರಹಳ್ಳಿ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ದುಷ್ಕರ್ಮಿಗಳು ವೃದ್ಧೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮಾಂಗಲ್ಯ ಸರ ಕಳ್ಳತನ ಮಾಡಿದ್ದಾರೆ.
ಶ್ರೀಲಕ್ಷ್ಮೀ (65) ಎಂಬುವವರು ಕೊಲೆಯಾದ ವೃದ್ಧೆ. ಮನೆಯಲ್ಲಿ ಏಕಾಂಗಿಯಾಗಿದ್ದ ವೃದ್ಧೆಯನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದ್ದು, ಕೇವಲ ತಾಳಿ ಸರಕ್ಕಾಗಿ ಅವರನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಘಟನೆ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.






