ವಿಜಯಪುರ: ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ವಿಜಯಪುರದಲ್ಲಿ ನಡೆದ ರೈತರ ಧರಣಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ (M.B. Patil) ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ, ಬೆಂಬಲ ಬೆಲೆ ನಿಗದಿಯಲ್ಲಿ ರಾಜ್ಯ ಸರ್ಕಾರದಷ್ಟೇ ಕೇಂದ್ರ ಸರ್ಕಾರದ ಪಾತ್ರವೂ ಮುಖ್ಯ ಎಂದು ಹೇಳಿದರು.
“ನಮ್ಮ ಸರ್ಕಾರ ರೈತರ ಪರವಾಗಿದೆ. ನಾನು (M.B. Patil), ತಿಮ್ಮಾಪುರ ಅವರು ಹಾಗೂ ಸತೀಶ್ ಜಾರಕಿಹೊಳಿ (Satish Jarkiholi) ಅವರು ರೈತರ ಪರವಾಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇವೆ. ನಮ್ಮ ಜಿಲ್ಲೆಯವರೇ ಆದ ಸಕ್ಕರೆ ಸಚಿವರು ಕೂಡಾ ಈ ಬಗ್ಗೆ ಚರ್ಚಿಸುತ್ತಾರೆ,” ಎಂದು ಸಚಿವರು ಭರವಸೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)ಅವರ ಅಧ್ಯಕ್ಷತೆಯಲ್ಲಿ ಸಕ್ಕರೆ ಸಚಿವರ ಜೊತೆಯಲ್ಲಿ ಸಭೆ ನಡೆಯಲಿದೆ. ನಾವೆಲ್ಲರೂ ಸೇರಿ ರೈತರ ಭಾವನೆಗಳನ್ನು ಗೌರವಿಸುವ ಕೆಲಸ ಮಾಡುತ್ತೇವೆ. ನಾಳೆ (ಗುರುವಾರ) ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು,” ಎಂದರು.
ಕಬ್ಬು ಬೆಂಬಲ ಬೆಲೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರವು ಮಹತ್ವದಾಗಿದೆ ಎಂದು ಒತ್ತಿ ಹೇಳಿದ ಸಚಿವರು, “ಕೇಂದ್ರ ಸರ್ಕಾರ 3,350 ರೂ. ಬೆಂಬಲ ಬೆಲೆ ನಿರ್ಧಾರ ಮಾಡಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಖಾಸಗಿ ಮತ್ತು ಸಹಕಾರಿ ಹೀಗೆ ಬೇರೆ ಬೇರೆ ರೀತಿಯಲ್ಲಿವೆ. ದರ ವಿಚಾರದಲ್ಲಿ ಕೆಲವೊಬ್ಬರಿಗೆ ಅಧಿಕಾರ ಇದೆ, ಕೆಲವು ಸಕ್ಕರೆ ಕಾರ್ಖಾನೆಗಳಿಗೆ ಇಲ್ಲ,” ಎಂದು ಪರಿಸ್ಥಿತಿಯನ್ನು ವಿವರಿಸಿದರು.
ಕಳೆದ 9 ವರ್ಷಗಳಿಂದ ಕಬ್ಬಿನ ಎಫ್‌ಆರ್‌ಪಿ (FRP) ದರದಲ್ಲಿ ಬದಲಾವಣೆ ಆಗಿಲ್ಲ. ಹೀಗಾಗಿ, ಬೆಂಬಲ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರ ಬಳಿ ನಿಯೋಗ ಹೋಗಿ ಮಾತನಾಡಬೇಕಿದೆ. ಸಿಎಂ ಸಿದ್ದರಾಮಯ್ಯ ಕೂಡಾ ಪ್ರಧಾನಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಾರೆ ಎಂದು ತಿಳಿಸಿದರು.
ನಾವು ಯಾರ ವಿರುದ್ಧವೂ ಆರೋಪ ಮಾಡುತ್ತಿಲ್ಲ. ಆದರೆ ರಾಜ್ಯದ ಜೊತೆಗೆ ಕೇಂದ್ರದ ಪಾತ್ರವೂ ಇದೆ. ಎರಡೂ ಸರ್ಕಾರ ಸೇರಿ ಕೆಲಸ ಮಾಡಬೇಕಿದೆ. ಬಿಜೆಪಿ ನಾಯಕ ವಿಜಯೇಂದ್ರ ಕೂಡ ಇದರ ಬಗ್ಗೆ ಗಮನ ಹರಿಸಬೇಕು,” ಎಂದು ಎಂ.ಬಿ. ಪಾಟೀಲ್ ಮನವಿ ಮಾಡಿದರು.






