ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ನಡೆದ ಭೀಕರ ರಸ್ತೆ ಅಪಘಾತ(Accident)ದಲ್ಲಿ ತೆಲಂಗಾಣ (Telangana)ಮೂಲದ ಉಪನ್ಯಾಸಕರೊಬ್ಬರು ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಮತ್ತು ಡಿಟಿಡಿಸಿ (DTDC) ಕೊರಿಯರ್ ವಾಹನದ ನಡುವೆ ಈ ದುರ್ಘಟನೆ ಸಂಭವಿಸಿದೆ.
ಕಾರು(Car) ಮತ್ತು ಡಿಟಿಡಿಸಿ (DTDC)ಕೊರಿಯರ್ (courier)ಸಾಗಣೆ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು,ಅಪಘಾತದಲ್ಲಿ ಒಟ್ಟು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಲ್ಲಿ ಕಾರಿನಲ್ಲಿದ್ದ ಇಬ್ಬರು ಹಾಗೂ ಡಿಟಿಡಿಸಿ ವಾಹನದ ಚಾಲಕ ಸೇರಿದ್ದಾರೆ.
ಮೃತಪಟ್ಟ ತೆಲಂಗಾಣ(Telangana)ದ ಇಬ್ಬರಲ್ಲಿ ಒಬ್ಬರು ನಾಗರಾಜ್ ಎಂದು ಗುರುತಿಸಲಾಗಿದೆ. ಇವರು ತೆಲಂಗಾಣದ ನಾರಾಯಣಖೇಡ್ ಪಟ್ಟಣದಲ್ಲಿರುವ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಇವರು ತಮ್ಮ ಸ್ನೇಹಿತರೊಂದಿಗೆ ಕಲಬುರಗಿಯ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನ ಮಾಡಿ ವಾಪಸ್ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಘಟನೆಯು ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.






