ಭಟ್ಕಳ ಪಟ್ಟಣದಲ್ಲಿ ಗೃಹ ಉಪಯೋಗಿ ವಸ್ತುಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ಘೋಷಿಸಿದ್ದ ‘ಗ್ಲೋಬಲ್ ಇಂಟರ್ನ್ಯಾಷನಲ್’ ಎಂಬ ಮಳಿಗೆಯ ಮಾಲೀಕ ಮುಂಗಡ ಹಣ ಪಡೆದು ಪರಾರಿಯಾದ ಘಟನೆ ನಡೆದಿದೆ. ಇದರಿಂದ ಹಣ ನೀಡಿ ವಂಚನೆಗೆ ಒಳಗಾದ ನೂರಾರು ಗ್ರಾಹಕರು ಅಂಗಡಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಭಟ್ಕಳ ಪಟ್ಟಣದ ರಥಬೀದಿಯ ಯೂನಿಯನ್ ಬ್ಯಾಂಕ್ ಎದುರಿನ ವಾಣಿಜ್ಯ ಸಂಕೀರ್ಣದಲ್ಲಿ ಇತ್ತೀಚೆಗೆ ಈ ‘ಗ್ಲೋಬಲ್ ಇಂಟರ್ನ್ಯಾಷನಲ್’ ಮಳಿಗೆ ತೆರೆದಿತ್ತು. ತಮಿಳುನಾಡು ಮೂಲದ ಉದಯಕುಮಾರ್ ರೇಂಗರಾಜು ಎಂಬಾತನು ಆರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡು ಈ ವ್ಯವಹಾರ ನಡೆಸುತ್ತಿದ್ದ. ಗೃಹ ಉಪಯೋಗಿ ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುವುದಾಗಿ ಜನರನ್ನು ನಂಬಿಸಿ, ಅನೇಕ ಗ್ರಾಹಕರಿಂದ ಲಕ್ಷಾಂತರ ರೂಪಾಯಿಗಳ ಮುಂಗಡ ಹಣವನ್ನು ಸುಮಾರು 25 ದಿನಗಳ ಅವಧಿಯಲ್ಲಿ ಸ್ವೀಕರಿಸಿದ್ದ.
ವಿಶೇಷ ಆಫರ್ ಎಂದು ನಂಬಿಸಿದ ಆರಂಭಿಕ ದಿನಗಳಲ್ಲಿ, ಮಳಿಗೆಯವರು ಟಿವಿ, ಫ್ರಿಜ್, ಎಸಿ ಸೇರಿ ಅನೇಕ ವಸ್ತುಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸಿದ್ದರು. ಇದರಿಂದ ವಿಶ್ವಾಸ ಗಳಿಸಿದ ಹಿನ್ನೆಲೆಯಲ್ಲಿ, ಮತ್ತಷ್ಟು ಜನರು ಮಳಿಗೆಗೆ ಬಂದು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣ ನೀಡಿ ತಮಗೆ ಬೇಕಾದ ಸಾಮಗ್ರಿಗಳನ್ನು ಬುಕ್ ಮಾಡಿ ಹೋಗಿದ್ದರು.
ಆದರೆ, ಬುಧವಾರ ಬೆಳಗ್ಗೆ ಏಕಾಏಕಿ ಅಂಗಡಿ ಬಾಗಿಲು ಮುಚ್ಚಿರುವುದನ್ನು ಕಂಡು ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಮುಂಗಡ ಹಣ ಸಂಗ್ರಹಿಸಿದ ಉದಯಕುಮಾರ್ ರೇಂಗರಾಜು ಊರು ಬಿಟ್ಟು ಪರಾರಿಯಾಗಿದ್ದು ದೃಢಪಟ್ಟಿದೆ. ತಾವು ಕೊಟ್ಟ ಹಣ ಮರಳಿಸಬೇಕು ಎಂದು ಪಟ್ಟುಹಿಡಿದು ಅಂಗಡಿ ಮುಂದೆ ಜಮಾಯಿಸಿದ್ದ ಜನರು, ಆಕ್ರೋಶದಿಂದ ಮಳಿಗೆಯೊಳಗೆ ನುಗ್ಗಿ ಬಾಗಿಲು ಒಡೆಯಲು ಪ್ರಯತ್ನಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದರು. ಹಣ ಕಳೆದುಕೊಂಡ ಗ್ರಾಹಕರು ದೂರು ನೀಡಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.






