ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ‘ಮತ ಕಳ್ಳತನ’ (ವೋಟ್ ಚೋರಿ) ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಜಯದ ಮುನ್ಸೂಚನೆ ಇದ್ದರೂ, ಫಲಿತಾಂಶಗಳು ಸಂಪೂರ್ಣ ಉಲ್ಟಾ ಆಗಿ ಹಲವು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಅವರು ಆರೋಪಿಸಿದರು. ಈ ವೇಳೆ ಮುಖ್ಯಮಂತ್ರಿ ನಯಾಜ್ ಸಿಂಗ್ ಸೈನಿ ಅವರ ವಿಶ್ವಾಸದ ಮಾತನ್ನೂ ಅವರು ಉಲ್ಲೇಖಿಸಿದರು.
ತಮ್ಮ ಮತ್ತು ಬಿಜೆಪಿ ನಡುವಿನ ಮತಗಳ ಅಂತರ 22 ಸಾವಿರ ಇದೆ. ಅಲ್ಲದೆ, ಮತ ಕಳ್ಳತನಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಉದಾಹರಣೆಗಳನ್ನು ನೀಡಿದ ಅವರು, ಒಂದೇ ಮಹಿಳೆಯ ಹೆಸರನ್ನು ಹಲವು ಬಾರಿ ಮತದಾನಕ್ಕೆ ಬಳಸಲಾಗಿದೆ ಎಂದು ಆರೋಪಿಸಿದರು. ಬ್ರೆಜಿಲ್ ಮೂಲದ ಮಾಡೆಲ್ ಒಬ್ಬರ ಹೆಸರು ಮತ್ತು ಫೋಟೋವನ್ನು ಪದೇ ಪದೇ ಬಳಸಿಕೊಂಡು, ಹಲವೆಡೆ ಅಂಚೆ ಮತಗಳನ್ನು ಚಲಾಯಿಸಲಾಗಿದೆ ಎಂದು ವಿವರಿಸಿದರು. ಈ ಮೂಲಕ ಒಟ್ಟು 25 ಲಕ್ಷ ಮತ ಕಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
”ವೋಟ್ ಚೋರಿ ಆಗಿರುವುದು ನೂರಕ್ಕೆ ನೂರರಷ್ಟು ಸತ್ಯ,” ಎಂದು `H ಫೈಲ್ಸ್ʼ ಹೆಸರಿನಲ್ಲಿ ದಾಖಲೆಗಳನ್ನು ಮುಂದಿಟ್ಟು ರಾಹುಲ್ ಗಾಂಧಿ ದೃಢಪಡಿಸಿದರು. ಈ ಮತ ಕಳ್ಳತನ ಕೇವಲ ಹರಿಯಾಣದ ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಡೀ ದೇಶವನ್ನೇ ಆವರಿಸಿಕೊಂಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಆದಾಗ್ಯೂ, ಸದ್ಯಕ್ಕೆ ನಾವು ಹರಿಯಾಣದ ಚುನಾವಣಾ ಪ್ರಕ್ರಿಯೆಯ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಹರಿಯಾಣದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆ ಇತ್ತು. ಆದರೆ ಫಲಿತಾಂಶ ಉಲ್ಟಾ ಆಗಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ದಾಖಲೆಗಳನ್ನು ಪರಿಶೀಲಿಸಿದಾಗಲೂ ಅದೇ ಅಚ್ಚರಿ ಮುಂದುವರೆಯಿತು ಎಂದರು. ಎಲ್ಲಾ ಸಮೀಕ್ಷೆಗಳು ಬಿಜೆಪಿ ವಿರುದ್ಧವಾಗಿದ್ದರೂ, ಮುಖ್ಯಮಂತ್ರಿ ಮಾತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ, ತಮ್ಮಲ್ಲಿ ಶೇ. 100ರಷ್ಟು ಸಾಕ್ಷ್ಯಗಳಿದ್ದು, ಅವುಗಳೊಂದಿಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.






