ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣದ ವಿಚಾರವಾಗಿ ರಾಜ್ಯ ಮಹಿಳಾ ಆಯೋಗ ಎಂಟ್ರಿಯಾಗಿದೆ. ಈ ಸಂದರ್ಭದಲ್ಲಿ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ದ ಕಾರ್ಯವೈಖರಿ ಕುರಿತು ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತನಿಖೆಯ ದಿಕ್ಕು ಮತ್ತು ವಿಧಾನವು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗವು SIT ಮುಖ್ಯಸ್ಥರಿಗೆ ಅಧಿಕೃತ ಪತ್ರ ಬರೆದಿದೆ. ಮಹಿಳೆಯರಿಗೆ ಸಂಬಂಧಿಸಿದ ಗಂಭೀರ ಪ್ರಕರಣಗಳ ಸಮಗ್ರ ತನಿಖೆಗಾಗಿ SIT ಅನ್ನು ರಚಿಸಲಾಗಿದ್ದರೂ, ಇದುವರೆಗೆ SIT ಆ ದೃಷ್ಟಿಕೋನದಲ್ಲಿ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಂಡಿಲ್ಲ ಎಂದು ಆಯೋಗವು ಪತ್ರದಲ್ಲಿ ಉಲ್ಲೇಖಿಸಿದೆ. SIT ಕಾರ್ಯವು ಕೇವಲ ಮಾನವ ಕಳೇಬರಗಳ ಉತ್ಖನನಕ್ಕೆ ಮಾತ್ರ ಸೀಮಿತವಾಗಿದೆ ಎಂದು ಆಯೋಗವು ಅಸಮಾಧಾನ ವ್ಯಕ್ತಪಡಿಸಿದೆ.
ಮಹಿಳೆಯರು ಮತ್ತು ಯುವತಿಯರ ಅಸಹಜ ಸಾವುಗಳು, ಕೊಲೆ ಪ್ರಕರಣಗಳು ಸೇರಿದಂತೆ ಅನುಮಾನಾಸ್ಪದ ಸಾವುಗಳು ಮತ್ತು ಇತರ ಸಂಬಂಧಿತ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಯೋಗವು ಪತ್ರದ ಮೂಲಕ SIT ಗೆ ಮನವಿ ಮಾಡಿದೆ. ಒಂದು ವೇಳೆ ಈ ಪ್ರಕರಣಗಳ ತನಿಖೆಯನ್ನು ಈಗಾಗಲೇ ನಡೆಸಿದ್ದರೆ, ಆ ಕುರಿತ ಸಂಪೂರ್ಣ ಮಾಹಿತಿಯನ್ನು ಕೂಡಲೇ ರಾಜ್ಯ ಮಹಿಳಾ ಆಯೋಗಕ್ಕೆ ಒದಗಿಸುವಂತೆಯೂ ಮನವಿ ಮಾಡಲಾಗಿದೆ.






