ಲಖಿಸರಾಯ್ (ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾತನ ನಡೆಯುತ್ತಿದ್ದಾಗಲೇ ರಾಜ್ಯದಲ್ಲಿ ಅಹಿತಕರ ಘಟನೆ ವರದಿಯಾಗಿದೆ. ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಲಖಿಸರಾಯ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿಜಯ್ ಕುಮಾರ್ ಸಿನ್ಹಾ (Vijay Kumar Sinha )ಅವರ ಬೆಂಗಾವಲು ಪಡೆಯ ಮೇಲೆ ಮತದಾನ ಕೇಂದ್ರದ ಸಮೀಪದ ಖೋರಿಯಾರಿ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದೆ.
ಘಟನೆ ನಡೆದ ಸಂದರ್ಭದಲ್ಲಿ ರಾಷ್ಟ್ರೀಯ ಜನತಾದಳ (Rashtriya Janata Dal) (ಆರ್‌ಜೆಡಿ) ಪಕ್ಷದ ಬೆಂಬಲಿಗರು ವಿಜಯ್ ಕುಮಾರ್ ಸಿನ್ಹಾ(Vijay Kumar Sinha) ಅವರನ್ನು ಸುತ್ತುವರೆದಿರುವ ವಿಡಿಯೋ ವೈರಲ್ ಆಗಿದ್ದು, ಇಲ್ಲಿರುವ ದೃಶ್ಯಾವಳಿಗಳ ಪ್ರಕಾರ, ಪ್ರತಿಭಟನಾಕಾರರು ಉಪಮುಖ್ಯಮಂತ್ರಿಗಳ (Deputy CM)ವಿರುದ್ಧ ‘ಮುರ್ದಾಬಾದ್’ ಘೋಷಣೆಗಳನ್ನು ಕೂಗುತ್ತಾ, ಸಿನ್ಹಾ ಅವರನ್ನು ಗುರಿಯಾಗಿಸಿ ಚಪ್ಪಲಿಗಳ (slippers) ನ್ನು ಎಸೆದಿರುವುದು ಕಂಡುಬರುತ್ತದೆ.
ಚುನಾವಣೆಯ ಪ್ರಮುಖ ದಿನದಂದೇ ಅಧಿಕಾರದಲ್ಲಿರುವ ಉಪಮುಖ್ಯಮಂತ್ರಿಯ ಬೆಂಗಾವಲು ವಾಹನದ ಮೇಲೆ ಈ ರೀತಿ ಕಲ್ಲು ತೂರಾಟ ಮತ್ತು ಹಲ್ಲೆ ಯತ್ನ ನಡೆದಿರುವುದು ಬಿಹಾರದಲ್ಲಿ ರಾಜಕೀಯ ವೈಷಮ್ಯ ತಾರಕಕ್ಕೇರಿರುವುದನ್ನು ಸೂಚಿಸುತ್ತದೆ.
ಪ್ರಸ್ತುತ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ.






