ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ‘ನವೆಂಬರ್ ಕ್ರಾಂತಿ’ಯ ಸದ್ದು ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಬಣದಿಂದಲೇ ಈ ಸಂಚಲನ ಶುರುವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಈ ಹೊಸ ರಾಜಕೀಯ ಸಮೀಕರಣಕ್ಕೆ ನಾಳೆ(ನ.7) ‘ಫಸ್ಟ್ ಡೋಸ್’ ನೀಡಲು ಸಿದ್ದರಾಮಯ್ಯ ಕ್ಯಾಂಪ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ರಾಜಣ್ಣ ಅವರ ನಿವಾಸದಲ್ಲಿ ಔತಣ ಕೂಟ ಆಯೋಜಿಸಲಾಗಿದೆ. ಮೇಲ್ನೋಟಕ್ಕೆ ಇದು ಕೇವಲ ಸೌಹಾರ್ದಯುತ ಭೋಜನಕೂಟದಂತೆ ಕಂಡರೂ, ರಾಜಕೀಯ ವಲಯದಲ್ಲಿ ಈ ಭೇಟಿಯು ತೀವ್ರ ಕುತೂಹಲ ಮತ್ತು ಸಂಚಲನಕ್ಕೆ ಕಾರಣವಾಗಿದೆ. ತುಮಕೂರು ಮಟ್ಟಿಗೆ ಸೀಮಿತವಾಗದ ಈ ಸಭೆಯು ದೊಡ್ಡ ಮಟ್ಟದ ರಾಜಕೀಯ ತಂತ್ರಗಾರಿಕೆಯ ಭಾಗವಾಗಿದೆ ಎನ್ನಲಾಗಿದೆ.
ಇನ್ನು ಮೂಲಗಳ ಪ್ರಕಾರ, ಈ ಭೋಜನಕೂಟ ಕೇವಲ ಊಟಕ್ಕೆ ಸೀಮಿತವಾದದ್ದಲ್ಲ. ಇದು ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಬಲ ಸಂದೇಶ ರವಾನಿಸುವ ಮತ್ತು ರಾಜ್ಯ ಘಟಕದಲ್ಲಿ ಆಂತರಿಕ ಸಮೀಕರಣಗಳನ್ನು ಬದಲಾಯಿಸುವ ಮೊದಲ ಹಂತದ ಯೋಜನೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ‘ತುಮಕೂರು ಡಿನ್ನರ್ ಮೀಟಿಂಗ್’ ಮೂಲಕ ಯಾರಿಗಾದರೂ ‘ದೊಡ್ಡ ಸಂದೇಶ’ ಹೋಗಲಿದೆಯೇ ಅಥವಾ ಕೆಲವು ನಾಯಕರಿಗೆ ‘ಬಿಗ್ ಶಾಕ್’ ಎದುರಾಗಲಿದೆಯೇ ಎಂಬ ಚರ್ಚೆಗಳು ತೀವ್ರಗೊಂಡಿವೆ. ದೆಹಲಿ ಮಟ್ಟದ ‘ಆಟ’ಕ್ಕಾಗಿ ರೂಪಿಸಲಾದ ಮೊದಲ ರಣತಂತ್ರ ಸಭೆ ಇದಾಗಿದೆ ಎನ್ನುವ ಅಭಿಪ್ರಾಯ ರಾಜಕೀಯ ಪಡಸಾಲೆಯಲ್ಲಿ ವ್ಯಕ್ತವಾಗಿದೆ.






