Home State Politics National More
STATE NEWS

‘Sagar Kavach’ ಹೆದ್ದಾರಿ ಸುರಂಗ ಮಾರ್ಗದಲ್ಲಿ ಬಾಂಬ್ ಪತ್ತೆ!

Dummy bomb found at karwar tunnel road side port a
Posted By: Sagaradventure
Updated on: Nov 6, 2025 | 7:37 AM

ಕಾರವಾರ: ಕರಾವಳಿ ಭದ್ರತಾ ವ್ಯವಸ್ಥೆಯ ಬಲ ಮತ್ತು ಸಿದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ದೇಶಾದ್ಯಂತ ನಡೆಯುತ್ತಿರುವ ಬೃಹತ್ ಅಣುಕು ಕಾರ್ಯಾಚರಣೆ ‘ಸಾಗರ ಕವಚ’ ಕಾರವಾರದಲ್ಲಿ ಸಂಚಲನ ಮೂಡಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗದ ಬಂದರು ಬಳಿ ಮೂರು ‘ಬಾಂಬ್‌ ಮಾದರಿ’ಯ ಪೆಟ್ಟಿಗೆಗಳು ಪತ್ತೆಯಾಗಿದ್ದು, ಜನರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು.

ಆದರೆ, ಇದು ನಿಜವಾದ ದಾಳಿ ಅಲ್ಲ, ಬದಲಿಗೆ ಪೂರ್ವ ನಿಯೋಜಿತ ಭದ್ರತಾ ಅಭ್ಯಾಸ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

​ನೌಕಾಪಡೆ ವಿರುದ್ಧ ಪೊಲೀಸ್ ಪಡೆಗಳ ಕಾದಾಟ:

ಕರಾವಳಿಯ ಭದ್ರತೆಯನ್ನು ಪರೀಕ್ಷಿಸಲು ಭಾರತೀಯ ನೌಕಾಪಡೆ, ತಟರಕ್ಷಕ ಪಡೆ, ಕರಾವಳಿ ಕಾವಲು ಪೊಲೀಸ್‌ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳು ಎರಡು ದಿನಗಳ ಅಭ್ಯಾಸದಲ್ಲಿ ತೊಡಗಿವೆ. ಈ ಕಾರ್ಯಾಚರಣೆಯಲ್ಲಿ ಪಡೆಗಳನ್ನು ‘ರೆಡ್ ಫೋರ್ಸ್’ ಮತ್ತು ‘ಬ್ಲೂ ಫೋರ್ಸ್’ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ರೆಡ್ ಫೋರ್ಸ್‌ನ ಸಿಬ್ಬಂದಿ ನೌಕಾ ಸಿಬ್ಬಂದಿ ಮಾರುವೇಷದಲ್ಲಿ ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಬಾಂಬ್ ಮಾದರಿಗಳನ್ನು ಇರಿಸಿದರೆ, ‘ಬ್ಲೂ ಫೋರ್ಸ್’ನ ಪೊಲೀಸ್ ತಂಡ ಅವುಗಳನ್ನು ಪತ್ತೆಹಚ್ಚಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.

ಬಂದರು ಬಳಿ ಹುಸಿ ಬಾಂಬ್ ಇಟ್ಟಿದ್ದ ಆರೋಪದ ಮೇಲೆ ವಶಕ್ಕೆ ಪಡೆಯಲಾದವರು ರೆಡ್ ಫೋರ್ಸ್‌ ಸಿಬ್ಬಂದಿ ಎಂದು ತಿಳಿದುಬಂದಿದೆ.

​ಸಮಗ್ರ ಕರಾವಳಿಯುದ್ದಕ್ಕೂ ಬಿಗಿ ಬಂದೋಬಸ್ತ್:

‘ಸಾಗರ ಕವಚ’ ಅಭ್ಯಾಸದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಸೂಕ್ಷ್ಮ ಪ್ರದೇಶಗಳಾದ ವಾಣಿಜ್ಯ ಬಂದರು, ಮೀನುಗಾರಿಕೆ ಬಂದರು, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಕಾಳಿ ಸೇತುವೆ, ಮಲ್ಲಾಪುರ ಮತ್ತು ಕದ್ರಾ ಸೇರಿದಂತೆ ಹಲವು ಕಡೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಮುಖ್ಯ ರಸ್ತೆಗಳಲ್ಲಿ ವಾಹನ ತಪಾಸಣೆ ತೀವ್ರಗೊಂಡಿದ್ದು, ಕಾಳಿ ಸೇತುವೆ, ಬೈತಖೋಲ, ಅರಗಾ ಮತ್ತು ಮುದಗಾ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪ್ರತಿ ವಾಹನವನ್ನು ಪರಿಶೀಲಿಸಲಾಗುತ್ತಿದೆ.

​ಕಡಲಿನಲ್ಲಿ ತೀವ್ರ ಗಸ್ತು: ಕೇವಲ ನೆಲದ ಮೇಲೆ ಮಾತ್ರವಲ್ಲದೆ, ಕಡಲಿನಲ್ಲಿಯೂ ಭದ್ರತಾ ಕವಚವನ್ನು ಬಿಗಿಗೊಳಿಸಲಾಗಿದೆ. ತಟರಕ್ಷಕ ಪಡೆ ಹಾಗೂ ಕರಾವಳಿ ಕಾವಲು ಪೊಲೀಸರು ಕಡಲ ತೀರದುದ್ದಕ್ಕೂ ದಿನಪೂರ್ತಿ ಗಸ್ತು ತಿರುಗುತ್ತಿದ್ದು, ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ತೀವ್ರ ನಿಗಾ ವಹಿಸಿದ್ದಾರೆ.

ನಾಗರಿಕರಲ್ಲಿ ಸಹಕಾರಕ್ಕೆ ಮನವಿ: ವಾಹನ ತಪಾಸಣೆ ಮತ್ತು ಭದ್ರತಾ ಪರಿಶೀಲನೆ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ. ಜೊತೆಗೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡುಬಂದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಕಾನೂನು ಪಾಲನೆಗೆ ಸಹಕರಿಸುವಂತೆ ಕೋರಲಾಗಿದೆ.

Shorts Shorts