ಉಡುಪಿ: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ನಕಲಿ ವೆಬ್‌ಸೈಟ್ (Fake Website) ಸೃಷ್ಟಿಸಿ, ದೇವಸ್ಥಾನದ ಅತಿಥಿಗೃಹಗಳ ಕೊಠಡಿ ಕಾಯ್ದಿರಿಸುವಿಕೆ (Room Booking) ನೆಪದಲ್ಲಿ ಭಕ್ತರಿಗೆ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಭಕ್ತರು “ಲಲಿತಾಂಬಿಕಾ ಅತಿಥಿಗೃಹ” ಕೊಠಡಿಗೆ ಆನ್‌ಲೈನ್ ಮೂಲಕ ರೂಂ ಬುಕ್ ಮಾಡುವ ವೇಳೆ ನಕಲಿ ವೆಬ್‌ಸೈಟ್‌ನಲ್ಲಿ ಹಣ ಪಾವತಿಸಿ ಮೋಸಗೊಂಡಿದ್ದಾರೆ. ವಂಚಕರು ಬುಕ್ಕಿಂಗ್ ಮಾಡಿದ ಭಕ್ತರಿಗೆ ನಕಲಿ ರಸೀದಿ (fake receipts) ನೀಡಿ, ರೂಂ ಬುಕ್ಕಿಂಗ್ ಖಚಿತವಾಗಿದೆ ಎಂದು ಭಕ್ತರಿಗೆ ಭ್ರಮೆ ಮೂಡಿಸಿದ್ದಾರೆ.
ಈ ವೆಬ್ ಸೈಟ್ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಂತೆಯೇ ವಿನ್ಯಾಸ ಮಾಡಿರುವ ಈ ನಕಲಿ ಪುಟದ ಮೂಲಕ ಭಕ್ತರನ್ನು ವಂಚಿಸಿರುವ ಬಗ್ಗೆ ದೇವಸ್ಥಾನದ ಸಿಇಒ ಪ್ರಶಾಂತ್ ಶೆಟ್ಟಿ (Prashant Shetty,) ಅವರೇ ಈ ಕುರಿತು ಅಧಿಕೃತ ದೂರು ಸಲ್ಲಿಸಿದ್ದು, ನಕಲಿ ಸೈಟ್‌ಗಳನ್ನು ತಕ್ಷಣ ತೆಗೆದುಹಾಕಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಟ್ರಸ್ಟಿಗಳು ಸಹ ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, “ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಕ್ಷಮಾರ್ಹವಲ್ಲ” ಎಂದು ಹೇಳಿದ್ದಾರೆ.






