ಬೆಂಗಳೂರು: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಂಟಿ ಮನೆಗಳನ್ನು ದೋಚಲು ದರೋಡೆಕೋರರು ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ನಿನ್ನೆ(ಬುಧವಾರ) ಮಧ್ಯಾಹ್ನ ಆನೇಕಲ್ ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ನಡೆದ ಘಟನೆಯೊಂದು, ಅಪರಿಚಿತರ ಬಗ್ಗೆ ಜನಸಾಮಾನ್ಯರು ಎಚ್ಚರಿಕೆ ವಹಿಸಬೇಕಾದ ಅಗತ್ಯತೆಯನ್ನು ತೋರಿಸಿದೆ.
’ಲಗ್ನಪತ್ರಿಕೆ’ ನೀಡುವ ಸೋಗಿನಲ್ಲಿ ಮಹಿಳೆಯ ಪ್ರವೇಶ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲ್ಲೂಕಿನ ನೆರಳೂರು ಗ್ರಾಮದ ಹೊರವಲಯದಲ್ಲಿರುವ ಮೊದಲನೇ ಮಹಡಿಯ ಮನೆಯೊಂದಕ್ಕೆ ಮಧ್ಯಾಹ್ನ 2-30ರ ಸುಮಾರಿಗೆ ಅಪರಿಚಿತ ಮಹಿಳೆಯೊಬ್ಬಳು ಆಗಮಿಸಿದ್ದಾಳೆ. ಈಕೆ ಮನೆಯ ಬಾಗಿಲು ಬಡಿದು, “ದೂರದ ಸಂಬಂಧಿಗಳಿಂದ ಲಗ್ನಪತ್ರಿಕೆ ನೀಡಬೇಕು” ಎಂದು ನಂಬಿಸಿದ್ದಾಳೆ.
ಸಂಬಂಧಿಯಿರಬಹುದು ಎಂದು ಭಾವಿಸಿದ ಮನೆಯ ಒಡತಿ, ಆಕೆಯನ್ನು ಯಾವುದೇ ಅನುಮಾನವಿಲ್ಲದೆ ಒಳಗೆ ಆಹ್ವಾನಿಸಿದ್ದಾರೆ. ಒಳಗೆ ಬಂದ ಆ ಅಪರಿಚಿತ ಮಹಿಳೆ ಕುಳಿತುಕೊಂಡು ಕುಡಿಯಲು ನೀರು ಕೇಳಿದ್ದಾಳೆ. ಒಡತಿ ನೀರು ತರಲು ಅಡುಗೆ ಮನೆಗೆ ತೆರಳುತ್ತಿದ್ದಂತೆ, ಆಕೆ ದಿಢೀರನೆ ಒಡತಿಯ ಹಿಂದಿನಿಂದ ಬಂದು ಬಾಯಿಯನ್ನು ಭದ್ರವಾಗಿ ಮುಚ್ಚಿ, ಕಿರುಚದಂತೆ ಕುತ್ತಿಗೆಗೆ ಕತ್ತಿ ಹಿಡಿದು ಬೆದರಿಸಿದ್ದಾಳೆ.
ಈ ವೇಳೆ ಮುಸುಕುದಾರಿ ವ್ಯಕ್ತಿಯೊಬ್ಬ ಆಗಮಿಸಿದ್ದು, ಅಪರಿಚಿತ ಮಹಿಳೆ ಮತ್ತು ಮುಸುಕುಧಾರಿ ವ್ಯಕ್ತಿ ಇಬ್ಬರೂ ಸೇರಿ ಒಡತಿಯನ್ನು ಕೊಠಡಿಯೊಂದಕ್ಕೆ ಕರೆದೊಯ್ದು, ಅವರ ಕೈಗಳನ್ನು ಹಿಂದಿನಿಂದ ಬಿಗಿದು ಕುರ್ಚಿಗೆ ಕಟ್ಟಿಹಾಕಿದ್ದಾರೆ. “ನಾವು ಹೇಳಿದಂತೆ ಕೇಳಿದರೆ ನಿನ್ನನ್ನು ಏನೂ ಮಾಡುವುದಿಲ್ಲ. ಮನೆಯಲ್ಲಿರುವ ಚಿನ್ನಾಭರಣಗಳು ಎಲ್ಲಿವೆ ಮತ್ತು ಬೀಗದಕೈ ಎಲ್ಲಿವೆ ಎಂದು ತಿಳಿಸು, ಇಲ್ಲದಿದ್ದರೆ ಕೊಲ್ಲುತ್ತೇವೆ” ಎಂದು ಕುತ್ತಿಗೆಗೆ ಚಾಕು ಒತ್ತಿ ಬೆದರಿಕೆ ಹಾಕಿದ್ದಾರೆ.
ಜೀವ ಭಯದಿಂದ ಹೆದರಿದ ಒಡತಿ, ಆಭರಣಗಳಿದ್ದ ಬೀರುಗಳ ಸ್ಥಳ ಮತ್ತು ಬೀಗದ ಕೈಗಳ ಜಾಗವನ್ನು ಅವರಿಗೆ ತಿಳಿಸಿದ್ದಾರೆ. ದರೋಡೆಕೋರರ ಜೋಡಿ, ಕೈಗೆ ಸಿಕ್ಕ ಎಲ್ಲಾ ಚಿನ್ನಾಭರಣಗಳನ್ನು ದೋಚಿಕೊಂಡು, ಒಡತಿಯನ್ನು ಕೈಕಾಲು ಕಟ್ಟಿಹಾಕಿದ ಸ್ಥಿತಿಯಲ್ಲೇ ಕೊಠಡಿಯೊಳಗೆ ಕೂಡಿಹಾಕಿ ಹೊರಗಿನ ಬಾಗಿಲಿಗೆ ಚಿಲಕ ಹಾಕಿ ಪರಾರಿಯಾಗಿದ್ದಾರೆ.
ನಾಗರಿಕರಿಗೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ:
ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ ಕಳ್ಳರು ಶುಭಕಾರ್ಯಗಳು, ಮನೆ ಗೃಹಪ್ರವೇಶ ಮುಂತಾದ ನೆಪಗಳಲ್ಲಿ ಪರಿಚಯಸ್ಥರು, ಸಂಬಂಧಿಕರಂತೆ ಮನೆಗಳಿಗೆ ಪ್ರವೇಶಿಸಿ ದರೋಡೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಹಿರಿಯರು ಮತ್ತು ಮಹಿಳೆಯರು ಮನೆಯಲ್ಲಿ ಒಂಟಿಯಾಗಿದ್ದಾಗ ಹೆಚ್ಚು ಎಚ್ಚರಿಕೆ ವಹಿಸಬೇಕು. ಅಪರಿಚಿತರು ಯಾವುದೇ ನೆಪ ಹೇಳಿ ಬಾಗಿಲಿಗೆ ಬಂದರೂ, ಬಾಗಿಲು ತೆರೆಯುವ ಬದಲು ಜಾಲರಿ ಮೂಲಕ ಪತ್ರಗಳನ್ನು ಸ್ವೀಕರಿಸಿ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.






