WhatsApp ತನ್ನ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಅಪ್‌ಡೇಟ್ ಒಂದನ್ನು ಪರೀಕ್ಷಿಸುತ್ತಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಫೋನ್ ನಂಬರ್‌ಗಳ ಬದಲಿಗೆ ತಮ್ಮದೇ ಆದ ಯೂಸರ್‌ನೇಮ್‌ಗಳನ್ನು (usernames) ಬಳಸಿಕೊಂಡು ಚಾಟ್ ಮಾಡಲು ಅವಕಾಶ ನೀಡಲಿದೆ.
ವೈಯಕ್ತಿಕ ಸಂಪರ್ಕ ಮಾಹಿತಿಯ ಗೌಪತ್ಯೆಯನ್ನು ಹೆಚ್ಚಿಸುವುದು ಮತ್ತು ಈ ಅಪ್ಲಿಕೇಶನ್‌ನ ಮೂಲಕ ಜನರು ಒಬ್ಬರನ್ನೊಬ್ಬರು ಸಂಪರ್ಕಿಸುವ ವಿಧಾನವನ್ನು ಬದಲಾಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ಆನ್‌ಲೈನ್‌ನಲ್ಲಿ ಖಾಸಗಿ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವನ್ನು ಇದು ಕಡಿಮೆ ಮಾಡಲಿದೆ ಎನ್ನಲಾಗಿದೆ.
ಈ ವೈಶಿಷ್ಟ್ಯವು ಪ್ರಸ್ತುತ ಬೀಟಾ ಹಂತದಲ್ಲಿದ್ದು, ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಗೌಪ್ಯವಾಗಿ ಇರಿಸಿಕೊಂಡು, ತಮ್ಮ ಪ್ರೊಫೈಲ್‌ನಲ್ಲಿ ಇತರರಿಗೆ ಕಾಣಿಸುವ ಕಸ್ಟಮ್ ಹ್ಯಾಂಡಲ್ ಅನ್ನು ರಚಿಸಲು ಇದು ಅವಕಾಶ ನೀಡುತ್ತದೆ. ಈ ಬದಲಾವಣೆಯು ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್‌ನ ವಿಧಾನಕ್ಕೆ ಹೋಲುವಂತೆ ಇರಲಿದೆ.
ವೈಯಕ್ತಿಕ ಸಂಪರ್ಕ ವಿವರಗಳನ್ನು ಬಹಿರಂಗಪಡಿಸದೇ, ಸಂದೇಶ ಕಳುಹಿಸಲು ಮತ್ತು ಗುಂಪು ಚಾಟ್‌ಗಳಲ್ಲಿ ಭಾಗವಹಿಸಲು ಈ ವ್ಯವಸ್ಥೆ ನೆರವಾಗಲಿದೆ. ಸದ್ಯ ಲಭ್ಯವಾಗಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ವಾಟ್ಸಾಪ್ ಇಂಟರ್‌ಫೇಸ್‌ನಲ್ಲಿ ಹೊಸ “ಯೂಸರ್‌ನೇಮ್” ವಿಭಾಗವು ಕಾಣಿಸಿಕೊಂಡಿದೆ. ಮತ್ತು ಸಂಪೂರ್ಣ ರೋಲ್‌ಔಟ್‌ಗೆ ಮುಂಚಿತವಾಗಿ ಬಳಕೆದಾರಹೆಸರುಗಳನ್ನು ರಿಸರ್ವ್ ಮಾಡಿಕೊಳ್ಳುವ ಬಗ್ಗೆ ಆರಂಭಿಕ ಸೂಚನೆಗಳು ದೊರೆತಿವೆ.
ಇದಲ್ಲದೇ, ನಕಲಿ ಪ್ರೊಫೈಲ್‌ಗಳು ಮತ್ತು ಯೂಸರ್‌ನೇಮ್ ಕಬಳಿಕೆಯನ್ನು ತಡೆಯಲು WhatsApp ಪರಿಶೀಲನಾ ಸಾಧನಗಳನ್ನು (verification tools) ಸಹ ಅಭಿವೃದ್ಧಿಪಡಿಸುತ್ತಿದೆ. ಒಮ್ಮೆ ಈ ಅಪ್‌ಡೇಟ್ ಅಧಿಕೃತವಾಗಿ ಬಿಡುಗಡೆಯಾದ ನಂತರ, ಇದು ವಿಶ್ವದ ಅತಿದೊಡ್ಡ ಮೆಸೇಜಿಂಗ್ ವೇದಿಕೆಗಳಲ್ಲಿ ಒಂದಾದ ಡಿಜಿಟಲ್ ಗೌಪ್ಯತೆ (digital privacy) ವ್ಯಾಖ್ಯಾನವನ್ನೇ ಹೊಸದಾಗಿ ಬರೆಯಲಿದೆ. ಸಂಪರ್ಕದ ದೃಷ್ಟಿಯಿಂದ ಫೋನ್ ನಂಬರ್‌ಗಳನ್ನು ಅವಲಂಬಿಸುವುದರಿಂದ ಡಿಜಿಟಲ್ ಐಡೆಂಟಿಟಿಗಳ (identities) ಕಡೆಗೆ ಒಂದು ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ.






