Home State Politics National More
STATE NEWS

Controversy Row ಸಂಸದ ಕಾಗೇರಿ ಬೆನ್ನಿಗೆ ನಿಂತ ಬಿಜೆಪಿ: ರಾಷ್ಟ್ರಗೀತೆ ಹೇಳಿಕೆಗೆ ಸಮರ್ಥನೆ!

Bjp supporting mp kageri controversy statement regarding national anthem
Posted By: Sagaradventure
Updated on: Nov 7, 2025 | 8:41 AM

ಉತ್ತರಕನ್ನಡ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಗಣಮನ ರಾಷ್ಟ್ರಗೀತೆ ಹೇಗಾಯಿತು ಎನ್ನುವುದರ ಕುರಿತು ಮಾತನಾಡಿರುವುದನ್ನು ಅರಿತುಕೊಳ್ಳದೇ ರಾಷ್ಟ್ರಗೀತೆಗೆ ಅಪಮಾನವಾಗುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ ಎಂದು ತಪ್ಪಾಗಿ ಬಿಂಬಿಸುತ್ತಿರುವ ಕಾಂಗ್ರೆಸ್ ವಕ್ತಾರರುಗಳು ಕಾಗೇರಿಯವರು ಕ್ಷಮೆ ಕೇಳಬೇಕು ಎನ್ನುವುದು ಸರಿಯಲ್ಲ ಎಂದು ಬಿಜೆಪಿ ಉತ್ತರಕನ್ನಡ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡುಗೋಡ್ ಪ್ರತಿಕ್ರಿಯಿಸಿದ್ದಾರೆ.

ಸಂಸದ ಕಾಗೇರಿ ಅವರ ರಾಷ್ಟ್ರಗೀತೆ ಕುರಿತು ಹೇಳಿಕೆ ಸಮರ್ಥಿಸಿಕೊಂಡ ಅವರು, ಕಾಗೇರಿ ಅವರು ತಮ್ಮ ಜೀವನದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡು ಸಂವಿಧಾನಕ್ಕೆ ಗೌರವ ಪೂರ್ವಕವಾಗಿದ್ದು ಜನಪ್ರಿಯ ಜನಪ್ರತಿನಿಧಿಯಾಗಿ ನಡೆದುಕೊಳ್ಳುತ್ತಿರುವುದು ಜನರ ಮನದಲ್ಲಿದೆ. ಕಾಂಗ್ರೆಸ್ ನವರು ತಮ್ಮದೇ ಓಲೈಕೆಯ ಅಜೆಂಡಾಗಳನ್ನು ಇಟ್ಟುಕೊಂಡು ಸ್ವಾತಂತ್ರ್ಯ ನಂತರದ ಭಾರತದಲ್ಲಿ ತಮ್ಮ ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚಿ ಹೇಳುತ್ತಾ, ವಾಸ್ತವಿಕವಾದ ಅಂಶಗಳನ್ನು ಮುಚ್ಚಿಟ್ಟು ತಾವು ಹೇಳಿರುವುದೇ ಇತಿಹಾಸ ಎನ್ನುವ ರೀತಿಯಲ್ಲಿ ಈ ದೇಶದಲ್ಲಿ ನಡೆದುಕೊಂಡು ಬಂದಿದೆ.

ವಾಸ್ತವವಾದ ಇತಿಹಾಸದ ಸಂಗತಿಗಳನ್ನು ಜನತೆಯ ಮುಂದೆ ಚರ್ಚೆಗೆ ಇಟ್ಟಾಗ ತಮ್ಮ ಬುಡಕ್ಕೆ ಕೊಳ್ಳಿ ಇಟ್ಟವರಂತೆ ಆಡುವ ಕಾಂಗ್ರೆಸ್ ನವರು ಬಿಜೆಪಿ, ಆರ್‌ಎಸ್ಎಸ್ ಕುರಿತು ವ್ರತಾ ಆರೋಪಗಳನ್ನು ಮಾಡುತ್ತಾ ಬಂದಿದೆ. ಕಾಂಗ್ರೆಸ್ನವರು ಭಾರತದ ಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿಕೊಂಡು ಹೇಳಿಕೆಗಳನ್ನು ನೀಡಲಿ. ಸನ್ಮಾನ್ಯ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ ಮತ್ತು ಅಭಿವೃದ್ಧಿ ಪರವಾದ ವಿಚಾರಗಳನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್ ಕೇವಲ ಬಿಜೆಪಿ ಮತ್ತು ಆರ್‌ಎಸ್ಎಸ್ ಅನ್ನು ಖಂಡಿಸುತ್ತಾ ತುಷ್ಟಿಕರಣದ ರಾಜಕಾರಣದಲ್ಲಿ ಮುಳುಗಿರುವುದು ಮತ್ತು ಕರ್ನಾಟಕ ರಾಜ್ಯದಲ್ಲಿ ಜನ ಹಿತವನ್ನು ಮರೆತು ಕೇವಲ ಅಧಿಕಾರಕ್ಕಾಗಿ ಡೊಂಬರಾಟ ನಡೆಸಿರುವುದು ಜನರ ಮುಂದೆ ಇದೆ.

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈಗಿನ ಸ್ಪೀಕರ್ ಯುಟಿ ಖಾದರ ಅವರ ಆಡಳಿತದಲ್ಲಿನ ಹಲವು ವ್ಯವಹಾರಗಳ ಕುರಿತು ಪ್ರಶ್ನಿಸಿದ್ದಕ್ಕಾಗಿ ಕಾಗೇರಿಯವರ ವಿರುದ್ಧ ಅಪಪ್ರಚಾರ ಮಾಡಲು ಕಾಂಗ್ರೆಸ್ ವ್ಯವಸ್ಥಿತವಾಗಿ ಟೂಲ್ ಕಿಟ್ಟನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಸಾಮಾಜಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ರಾಷ್ಟ್ರಭಕ್ತಿಯಿಂದ ಸುದೀರ್ಘವಾದ ರಾಜಕೀಯ ಜೀವನ ನಡೆಸಿ ಬಂದಿರುವ ಕಾಗೇರಿ ಅವರು ಹೇಳಿದ ಸತ್ಯಗಳನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್ ಕಾಗೇರಿಯವರ ವಿರುದ್ಧ ಸೇಡಿನ ರಾಜಕೀಯ ಹೇಳಿಕೆಗಳನ್ನು ಕೊಟ್ಟು ಅಪಪ್ರಚಾರ ಮಾಡುವ ಕ್ರಮಕ್ಕೆ ಕೈ ಹಾಕುತ್ತಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ನಡೆದುಕೊಳ್ಳುತ್ತಿರುವ ರೀತಿ ಮತ್ತು ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆ ಸೆಳೆಯಲು ಇಲ್ಲಸಲ್ಲದ ತಂತ್ರ ಅನುಸರಿಸುತ್ತಿದೆ.

ರಾಜ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿರುವ ಆಡಳಿತ ವ್ಯವಸ್ಥೆಯ ಸುಧಾರಣೆಗೆ ರಾಜ್ಯ ಕಾಂಗ್ರೆಸ್ ಗಮನಹರಿಸಲಿ. ಕೇಂದ್ರದ ವಿರೋಧ ಪಕ್ಷದ ನಾಯಕರದ ರಾಹುಲ್ ಗಾಂಧಿಯವರು ಸುಳ್ಳು ಆರೋಪಗಳನ್ನು ಮಾಡುತ್ತಾ ಸಂವಿಧಾನಿಕ ಹುದ್ದೆಗಳಿಗೆ, ಸಂಸ್ಥೆಗಳಿಗೆ ತೋರುತ್ತಿರುವ ಅಗೌರವಗಳ ಕುರಿತು ಕಾಂಗ್ರೆಸ್ಸಿಗರು ಮಾತನಾಡಲಿ. ಕೇವಲ ಮಾಧ್ಯಮದ ಮೂಲಕ ಬಿಜೆಪಿ, ಆರ್‌ಎಸ್ಎಸ್ ಮತ್ತು ಕಾಗೇರಿ ಅವರನ್ನು ಟೀಕಿಸುವುದನ್ನು ಬಿಟ್ಟು ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣವಾಗಿ ಸ್ತಬ್ದವಾಗಿರುವ ಆಡಳಿತ ವ್ಯವಸ್ಥೆ ಸುಧಾರಣೆಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವಲ್ಲಿ ಕಾಂಗ್ರೆಸ್ಸಿಗರು ಗಮನಹರಿಸುವುದು ಒಳ್ಳೆಯದು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

Shorts Shorts