ಬೆಂಗಳೂರು: ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸಭೆಯಲ್ಲಿ ಕಾರ್ಖಾನೆ ಮಾಲೀಕರು, ದಕ್ಷಿಣ ಭಾರತದ ಕಾರ್ಖಾನೆಗಳಿಗೆ ಕೇಂದ್ರದ ನೀತಿಗಳಿಂದ ಅನ್ಯಾಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಉತ್ತರ ಭಾರತದ ಕಾರ್ಖಾನೆಗಳು ಕೇಂದ್ರದ ನೀತಿಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲ, ಆದರೆ ನಾವು ಧ್ವನಿ ಎತ್ತಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡರು.
“ನಾವು ಸಾಲ ಮಾಡಿ, ಬ್ಯಾಂಕ್‌ಗಳ ಬೆನ್ನುಬಿದ್ದು ಕಾರ್ಖಾನೆಗಳನ್ನು ಸ್ಥಾಪಿಸಿದ್ದೇವೆ. ಆದರೆ, ರೈತರ ಹೆಸರಿನಲ್ಲಿ ಕೆಲವರು ಏನೇನೋ ಮಾತನಾಡುತ್ತಾರೆ. ನಷ್ಟದಲ್ಲಿ ಕಾರ್ಖಾನೆಗಳನ್ನು ನಡೆಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ, ನಾವು ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುತ್ತೇವೆ. ಸರ್ಕಾರವೇ ನಡೆಸಲಿ ಅಥವಾ ಬೇರೆ ಯಾರಾದರೂ ನಡೆಸಲಿ,” ಎಂದು ನೇರ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ನಡೆಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಮಾಲೀಕರು ವಿವರಿಸಿದರು. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಬ್ಬಿನಿಂದ ಸಕ್ಕರೆ ರಿಕವರಿ ಪ್ರಮಾಣ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ ರಿಕವರಿ ಪ್ರಮಾಣ ಶೇ. 14 ರಷ್ಟಿದ್ದರೆ, ಇಲ್ಲಿ ಅಷ್ಟು ಪ್ರಮಾಣದ ಸಕ್ಕರೆ ಸಿಗುತ್ತಿಲ್ಲ. ಆದರೂ, ಮಹಾರಾಷ್ಟ್ರದ ದರಗಳಿಗೆ ಹೋಲಿಸಿ ಇಲ್ಲಿನ ರೈತರು ಅದೇ ಹಣವನ್ನು ಕೇಳುತ್ತಿದ್ದಾರೆ. ರೈತರ ಬೇಡಿಕೆಗಳನ್ನು ಸಹ ನೋಡಿಕೊಳ್ಳಬೇಕು, ಆದರೆ ಉತ್ಪಾದನೆಯಲ್ಲಿ ವ್ಯತ್ಯಾಸವಿದ್ದಾಗ ರೈತರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಸಕ್ಕರೆ ಮಾತ್ರವಲ್ಲದೆ, ಉಪ ಉತ್ಪನ್ನಗಳಾದ ವಿದ್ಯುತ್ ಮತ್ತು ಎಥೆನಾಲ್ ಉತ್ಪಾದಿಸಿದರೂ ನಿರಂತರವಾಗಿ ನಷ್ಟದಲ್ಲಿದ್ದೇವೆ ಎಂದು ಕಾರ್ಖಾನೆ ಮಾಲೀಕರು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು. ಸದ್ಯ ಕಾರ್ಖಾನೆಗಳು ತೀವ್ರ ನಷ್ಟದ ಸುಳಿಯಲ್ಲಿ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.






