ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಐಜಿಐಎ) ಶುಕ್ರವಾರ ಬೆಳಗ್ಗೆ ವಾಯು ಸಂಚಾರ ನಿಯಂತ್ರಣ(ಎಟಿಸಿ) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ವಿಮಾನಗಳ ಹಾರಾಟಕ್ಕೆ ತೀವ್ರ ಅಡಚಣೆಯುಂಟಾಯಿತು. ಈ ತಾಂತ್ರಿಕ ಸಮಸ್ಯೆಯಿಂದಾಗಿ 150ಕ್ಕೂ ಹೆಚ್ಚು ವಿಮಾನಗಳ ನಿರ್ಗಮನ ವಿಳಂಬವಾಗುವಂತಾಯಿತು.
ದೆಹಲಿ ವಿಮಾನ ನಿಲ್ದಾಣವು ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ 1,500ಕ್ಕೂ ಹೆಚ್ಚು ವಿಮಾನ ಸಂಚಾರವನ್ನು ನಿರ್ವಹಿಸುತ್ತದೆ. ಈ ಅಡಚಣೆಗೆ ಪ್ರಮುಖ ಕಾರಣ ಆಟೋಮ್ಯಾಟಿಕ್ ಮೆಸೇಜ್ ಸ್ವಿಚಿಂಗ್ ಸಿಸ್ಟಮ್ (ಎಎಂಎಸ್‌ಎಸ್) ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎಎಂಎಸ್‌ಎಸ್ ವ್ಯವಸ್ಥೆಯು ವಿಮಾನ ಹಾರಾಟದ ಯೋಜನಾ ಮಾಹಿತಿಯನ್ನು ಆಟೋ ಟ್ರ್ಯಾಕ್ ಸಿಸ್ಟಮ್ (ಎಟಿಎಸ್) ಗೆ ರವಾನಿಸುತ್ತದೆ.
ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹೇಳಿಕೆಯ ಪ್ರಕಾರ, ಎಟಿಸಿ ಸಿಬ್ಬಂದಿ ವಿಮಾನಗಳ ಹಾರಾಟದ ಯೋಜನೆಗಳನ್ನು ಸದ್ಯ ಕೈಯಿಂದಲೇ ಪ್ರಕ್ರಿಯೆಗೊಳಿಸುತ್ತಿದ್ದಾರೆ. ಇದರಿಂದಾಗಿ ವಿಳಂಬ ಉಂಟಾಗಿದೆ. ತಾಂತ್ರಿಕ ತಂಡಗಳು ಸಾಧ್ಯವಾದಷ್ಟು ಬೇಗ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕಾರ್ಯನಿರ್ವಹಿಸುತ್ತಿವೆ.
ಈ ಸಮಸ್ಯೆ ಗುರುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪ್ರಾರಂಭವಾಗಿದ್ದು, ಅಂದಿನಿಂದ ವಾಯು ಸಂಚಾರ ನಿಯಂತ್ರಣಾಧಿಕಾರಿಗಳು (ಎಟಿಸಿಒಗಳು) ತಮ್ಮ ಪರದೆಗಳ ಮೇಲೆ ವಿಮಾನ ಹಾರಾಟದ ಯೋಜನೆಗಳನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಾಗಲಿಲ್ಲ. ವಿಮಾನದ ನಿರ್ಗಮನಕ್ಕೆ ಮುನ್ನ ಮಾಡುವ ಪ್ರತಿ ಕಾರ್ಯವನ್ನೂ ಕೈಯಾರೆ ಮಾಡಬೇಕಾಗಿ ಬಂದಿರುವುದರಿಂದ ಕಾರ್ಯಾಚರಣೆಯ ವೇಗ ಕುಂಠಿತಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ದಟ್ಟಣೆಗೆ ಕಾರಣವಾಗಿದೆ.






