ಕಾರವಾರ: ಬೆಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಜನಪ್ರತಿನಿಧಿಗಳ ನ್ಯಾಯಾಲಯ ರದ್ದುಪಡಿಸಿದೆ. ಇದರಿಂದಾಗಿ ಅವರು ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದು ಜೈಲು ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಇಡಿ ಅಧಿಕಾರಿಗಳು ಸೈಲ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಪಟ್ಟ ಕಡೆಗಳಲ್ಲಿ ದಾಳಿ ನಡೆಸಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಕ್ಕೆ ಪಡೆದಿದ್ದರು. ಆದರೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಶಾಸಕ ಸೈಲ್ ದೆಹಲಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಹಿನ್ನಲೆ, ಇಡಿ (ED) ವಿಚಾರಣಾ ಪ್ರಕರಣದಲ್ಲಿ ಹೈಕೋರ್ಟ್ ಅಕ್ಟೋಬರ್ 25ರ ತನಕ ಜಾಮೀನು ನೀಡಿ ಆದೇಶ ಮಾಡಿತ್ತು.
ನಂತರ ಚಿಕಿತ್ಸೆ ಮತ್ತು ಆರೋಗ್ಯದ ವಿಚಾರವನ್ನು ಉಲ್ಲೇಖಿಸಿ ಜಾಮೀನು ಅವಧಿಯನ್ನು ವಿಸ್ತರಿಸಲು ಸಲ್ಲಿಸಿದ ಮನವಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಸ್ವೀಕರಿಸಿ ನವೆಂಬರ್ 7ರ ತನಕ ಕಾಲಾವಕಾಶ ನೀಡಿತ್ತು.
ಆದರೆ ಈಗ ಮಧ್ಯಂತರ ಜಾಮೀನು ರದ್ದಾದ ಹಿನ್ನಲೆಯಲ್ಲಿ, ಸೈಲ್ ಅವರಿಗೆ ಮತ್ತೆ ಜೈಲು ಪಾಲಾಗಬೇಕಾದ ಸ್ಥಿತಿ ಎದುರಾಗಿದೆ. ನ್ಯಾಯಾಲಯದ ತೀರ್ಪಿನಿಂದಾಗಿ ಶಾಸಕ ಸತೀಶ್ ಸೈಲ್ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.






