ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ, ಕೆಜಿಎಫ್ ಚಿತ್ರದಲ್ಲಿ ‘ಚಾಚಾ’ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟ ಹರೀಶ್ ರೈ ಅವರು ಗುರುವಾರ ನಿಧನರಾಗಿದ್ದಾರೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಥೈರಾಯ್ಡ್ ಕ್ಯಾನ್ಸರ್‌ನ 4ನೇ ಹಂತದಿಂದ ಬಳಲುತ್ತಿದ್ದ ಅವರಿಗೆ 55 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ದಿವಂಗತ ನಟ ಹರೀಶ್ ರೈ ಅವರ ಅಂತ್ಯಕ್ರಿಯೆಯಲ್ಲಿ ‘ಕೆಜಿಎಫ್’ ನಾಯಕ ನಟ ಯಶ್ ಅವರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು. ಯಶ್ ಅವರು ಹೂವಿನ ಹಾರವನ್ನು ಅರ್ಪಿಸಿ ಗೌರವ ಸಲ್ಲಿಸಿದರು ಮತ್ತು ದುಃಖದಲ್ಲಿದ್ದ ಹರೀಶ್ ರೈ ಅವರ ಪುತ್ರನಿಗೆ ಸಾಂತ್ವಾನ ಹೇಳಿದರು.
ಎಕ್ಸ್ (X) ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ, ಬಿಳಿಯ ಶರ್ಟ್ ಧರಿಸಿದ್ದ ಯಶ್ ಅವರು ಕೈ ಮುಗಿದು ಅಲ್ಲಿ ನೆರೆದಿದ್ದ ಹಲವರಿಗೆ ನಮಸ್ಕರಿಸಿದರು. ಗಾಜಿನ ಶವಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ಹರೀಶ್ ರೈ ಅವರ ಪಾರ್ಥಿವ ಶರೀರಕ್ಕೆ ಯಶ್ ಹಾರವನ್ನು ಅರ್ಪಿಸಿದರು. ನಂತರ, ಅವರು ಮೃತರ ಪುತ್ರ ರೋಷನ್ ಪಕ್ಕದಲ್ಲಿ ನಿಂತರು. ಕಣ್ಣೀರು ಹಾಕುತ್ತಿದ್ದ ಬಾಲಕನನ್ನು ತಬ್ಬಿಕೊಂಡು, ಯಶ್ ಅವರು ಭಾವುಕರಾಗಿ ಮಾತನಾಡುತ್ತಾ ಆತನಿಗೆ ಧೈರ್ಯ ತುಂಬಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಕ್ಸ್ (X) ಮೂಲಕ ಹರೀಶ್ ರೈ ಅವರ ನಿಧನವನ್ನು ಖಚಿತಪಡಿಸಿ ಸಂತಾಪ ಸೂಚಿಸಿದ್ದಾರೆ. “ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ಹರೀಶ್ ರೈ ಅವರ ನಿಧನ ಅತ್ಯಂತ ದುಃಖಕರ ಸಂಗತಿ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹರೀಶ್ ರೈ ಅವರ ಅಗಲಿಕೆಯಿಂದ ಚಿತ್ರರಂಗ ಬಡವಾಗಿದೆ,” ಎಂದು ಡಿ.ಕೆ.ಶಿವಕುಮಾರ್ ಬರೆದುಕೊಂಡಿದ್ದಾರೆ.
ಅವರು ತಮ್ಮ ಟ್ವೀಟ್‌ನಲ್ಲಿ, “‘ಓಂ’, ‘ಹಲೋ ಯಮ’ದಂತಹ ಚಿತ್ರಗಳಲ್ಲಿ ಮತ್ತು ಕೆಜಿಎಫ್ ಹಾಗೂ ಕೆಜಿಎಫ್ 2 ಚಿತ್ರಗಳಲ್ಲಿ ಹರೀಶ್ ರೈ ಅವರು ಅದ್ಭುತವಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ಮತ್ತು ಆತ್ಮೀಯರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ,” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ದಶಕಗಳ ವೃತ್ತಿಜೀವನ
ಹರೀಶ್ ರೈ ಅವರು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ತಮ್ಮ ಅಭಿನಯದ ಮೂಲಕ ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.






