ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆಸ ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣದಲ್ಲಿ, ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate – ಇ.ಡಿ.) ದೋಷಾರೋಪ ಪಟ್ಟಿ ಸಲ್ಲಿಸಿದೆ.
ಈ ಚಾರ್ಜ್ ಶೀಟ್ ಅನ್ನು ಇ.ಡಿ.ಯು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಬೇಲೆಕೇರಿ ಬಂದರಿನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಅದಿರನ್ನು ಅಕ್ರಮವಾಗಿ ವಿದೇಶಗಳಿಗೆ ರಫ್ತು ಮಾಡಿದ್ದ ಪ್ರಕರಣದ ತನಿಖೆಯ ಭಾಗವಾಗಿ ಇತ್ತೀಚೆಗೆ ಇ.ಡಿ ದಾಳಿ ನಡೆಸಿತ್ತು.
ಇ.ಡಿ. ನಡೆಸಿದ ತನಿಖೆಯಲ್ಲಿ ಶಾಸಕ ಸತೀಶ್ ಸೈಲ್ ಅವರ ಕೋಟ್ಯಂತರ ರೂಪಾಯಿಗಳ ಅಕ್ರಮ ವಹಿವಾಟುಗಳು ಬೆಳಕಿಗೆ ಬಂದಿದ್ದವು. ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಇ.ಡಿ.ಯು ಈ ಹಿಂದೆ ಶಾಸಕರಿಗೆ ಸೇರಿದ ₹13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: ???? MLA Sail ಶಾಸಕ ಸೈಲ್‌ಗೆ ತಪ್ಪದ ಸಂಕಷ್ಟ: ಮತ್ತೆ ಬಂಧನ ಭೀತಿ!
ಈ ಎಲ್ಲಾ ಆರ್ಥಿಕ ವಹಿವಾಟುಗಳು, ವಶಪಡಿಸಿಕೊಂಡ ದಾಖಲೆಗಳು ಹಾಗೂ ಚಿನ್ನಾಭರಣಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಆಧರಿಸಿ ಇ.ಡಿ.ಯು ಇದೀಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ಚಾರ್ಜ್ ಶೀಟ್ ದಾಖಲಿಸಲಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.






