ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಲಹಳ್ಳಿ ಕಾಲೋನಿಯಲ್ಲಿ ಸಂಭವಿಸಿದ ದುರಂತವೊಂದರಲ್ಲಿ, ಸಿಮೆಂಟ್ ಮಿಕ್ಸರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಒಂದೂವರೆ ವರ್ಷದ ಮಗುವಿನ ಮೇಲೆ ಗೋಡೆ ಕುಸಿದು ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಲಾರಿಯು ರಸ್ತೆಯಲ್ಲಿ ಸಾಗುತ್ತಿದ್ದಾಗ ವಿದ್ಯುತ್ ವೈಯರ್ ಅನ್ನು ಎಳೆದೊಯ್ದ ಕಾರಣ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಲಾರಿ ಚಾಲಕನ ಈ ಅಜಾಗರೂಕತೆಯಿಂದಾಗಿ, ವಿದ್ಯುತ್ ವೈಯರ್ ಮಿಕ್ಸರ್ ಲಾರಿಗೆ ಸಿಲುಕಿದ್ದು, ಪರಿಣಾಮ ಮನೆಯ ವೈರಿಂಗ್ ಕಂಬವು ಕಿತ್ತುಬಂದಿದೆ. ಕಂಬದ ಆಧಾರ ಕುಸಿದ ಕಾರಣ, ಅದಕ್ಕೆ ಹೊಂದಿಕೊಂಡಿದ್ದ ಕಾಂಪೌಂಡ್ ಗೋಡೆಯು ಏಕಾಏಕಿ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ, ಗೋಡೆಯ ಪಕ್ಕದ ಆವರಣದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಪ್ರಣವ್ ಎಂಬ ಮಗು ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿತ್ತು.
ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಪ್ರಣವ್ ಸಾವನ್ನಪ್ಪಿದ್ದಾನೆ. ಚಾಲಕನ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದ್ದಾಗಿ ಆರೋಪಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಎಚ್‌ಎಎಲ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.






