ಬೆಂಗಳೂರು: ಬೆಂಗಳೂರಿನ ಬಿಗಿಭದ್ರತೆಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕುರಿತು ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಗಂಭೀರ ಅಪರಾಧಿಗಳ ಕೈಗೆ ಮೊಬೈಲ್ ಫೋನ್‌ಗಳು ಲಭ್ಯವಾಗುತ್ತಿರುವ ಬೆನ್ನಲ್ಲೇ, ಇದೀಗ ಭಯೋತ್ಪಾದಕರ ಕೈಗೂ ಮೊಬೈಲ್ ಫೋನ್‌ಗಳು ಸಿಗುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು, ಇದು ದೇಶದ ಭದ್ರತೆಯ ವಿಷಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಜೈಲಿನಲ್ಲಿಯೇ ಇದ್ದುಕೊಂಡೂ ಉಗ್ರಗಾಮಿಗಳಿಗೆ ರಾಜಾತಿಥ್ಯ ಸಿಗುತ್ತಿದ್ದು, ಲಷ್ಕರ್-ಎ-ತೈಬಾ (LeT) ಸೇರಿದಂತೆ ಉಗ್ರ ಸಂಘಟನೆಗಳ ಕೈದಿಗಳು ಸ್ಮಾರ್ಟ್ ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂಬುದು ಬಹಿರಂಗಗೊಂಡಿದೆ. ಭಯೋತ್ಪಾದಕರು ಜೈಲಿನೊಳಗಿಂದಲೇ ವಿಡಿಯೋ ಕಾಲ್ ಅಥವಾ ಫೋನ್ ಕರೆಗಳ ಮೂಲಕ ತಮ್ಮ ಚಟುವಟಿಕೆಗಳನ್ನು ಮುಂದುವರಿಸುವ ಸಾಧ್ಯತೆ ಇದ್ದು, ದೇಶ ವಿರೋಧಿಗಳಿಗೆ ಮೊಬೈಲ್ ಕೊಡುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ದೇಶದ್ರೋಹಿಗಳಿಗೂ ಜೈಲುಗಳು ಫೈವ್ ಸ್ಟಾರ್ ಹೋಟೆಲ್‌ನಂತೆ ಆಗುತ್ತಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಬಿಗಿಭದ್ರತೆಯ ಬ್ಯಾರಕ್‌ಗಳಲ್ಲೂ ಉಗ್ರರ ಕೈಗೆ ಫೋನ್ ಸಿಗುತ್ತಿರುವುದು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ.
ಇದನ್ನೂ ಓದಿ: ???? Parappana Agrahara | ಆರೋಪಿಗಳ ಪಾಲಿಗೆ ಸ್ವರ್ಗವಾಯ್ತಾ ಕೇಂದ್ರ ಕಾರಾಗೃಹ?
ಈ ಕುರಿತು ಜೈಲಿನೊಳಗಿನ ಸ್ಫೋಟಕ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಕಾರಾಗೃಹಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಬಿ.ದಯಾನಂದ್ ಅವರು ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ.
ಕ್ರಿಮಿನಲ್ ಕೈದಿಗಳ ಕೈಗೆ ಮೊಬೈಲ್ ಸಿಗುತ್ತಿರುವ ಬೆಳವಣಿಗೆಯ ಜೊತೆಗೆ, ಇದೀಗ ಉಗ್ರರ ಕೈಗೂ ಫೋನ್ ಸಿಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ, ಜೈಲಿನೊಳಗೆ ವೈರಲ್ ಆಗಿರುವ ವಿಡಿಯೋಗಳ ಸಂಪೂರ್ಣ ಪರಿಶೀಲನೆಗೆ ಬಿ. ದಯಾನಂದ್ ಅವರು ಜೈಲಾಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಿದ್ದಾರೆ. ಮುಖ್ಯವಾಗಿ, ಕುಖ್ಯಾತ ಅಪರಾಧಿ ಉಮೇಶ್ ರೆಡ್ಡಿ ಸಂಬಂಧಿತ ವಿಡಿಯೋಗಳ ಕುರಿತು ಸಹ ಕೂಲಂಕುಷ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.






