ಬೆಂಗಳೂರು: ರಾಜ್ಯ ಸರ್ಕಾರವು ಕಬ್ಬಿಗೆ ಬೆಲೆ ನಿಗದಿಪಡಿಸಿದ ನಂತರವೂ ಬೆಳೆಗಾರರ ಅಸಮಾಧಾನ ಮುಂದುವರಿದಿದೆ. ಪ್ರತಿ ಟನ್ ಕಬ್ಬಿಗೆ ₹3,300 ಬೆಂಬಲ ಬೆಲೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಘೋಷಣೆಯಿಂದ ಆರಂಭದಲ್ಲಿ ಸಂಭ್ರಮಿಸಿದ್ದ ಕಬ್ಬು ಬೆಳೆಗಾರರು, ಇದೀಗ ಸರ್ಕಾರದ ಷರತ್ತಿನ ಆದೇಶದಿಂದಾಗಿ ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.
ಸರ್ಕಾರದ ಆದೇಶದ ಪ್ರಕಾರ, ಪ್ರತಿ ಟನ್‌ಗೆ ₹3,300 ಬೆಂಬಲ ಬೆಲೆಯು ಕೇವಲ ಶೇ 11.25 ರಿಕವರಿ (ಸಕ್ಕರೆ ಅಂಶ) ಇರುವ ಕಬ್ಬಿಗೆ ಮಾತ್ರ ಅನ್ವಯವಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಕಬ್ಬು ಈ ಪ್ರಮಾಣದ ರಿಕವರಿಯನ್ನು ತಲುಪುವುದಿಲ್ಲವಾದ್ದರಿಂದ, ಸರ್ಕಾರದ ಈ ನಿರ್ಧಾರದಿಂದ ಹಲವು ಜಿಲ್ಲೆಗಳ ರೈತರಿಗೆ ಯಾವುದೇ ರೀತಿಯ ಲಾಭ ಸಿಗುವುದಿಲ್ಲ ಎಂಬ ಆತಂಕ ಶುರುವಾಗಿದೆ. ಈ ರಿಕವರಿ ಗೊಂದಲದ ಹಿನ್ನೆಲೆಯಲ್ಲಿ, ಕಬ್ಬು ಬೆಳೆಗಾರರ ಹೋರಾಟವು ಹಲವು ಜಿಲ್ಲೆಗಳಲ್ಲಿ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ, ಸಕ್ಕರೆ ಖಾತೆ ಸಚಿವ ಶಿವಾನಂದ್ ಪಾಟೀಲ್ ಅವರು ಇಂದು ಬೆಳಗಾವಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈಗಾಗಲೇ ಘೋಷಣೆಯಾದ ₹3,300 ಬೆಲೆಯನ್ನು ರಿಕವರಿ ಷರತ್ತಿಲ್ಲದೆ ಎಲ್ಲ ಕಬ್ಬಿಗೂ ಅನ್ವಯಿಸುವಂತೆ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದು, ಸಚಿವರ ಭೇಟಿಯ ಬಳಿಕವಾದರೂ ಈ ಗೊಂದಲಕ್ಕೆ ಸ್ಪಷ್ಟನೆ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.






