Home State Politics National More
STATE NEWS

Student Death | ಶಾಲೆಯಿಂದ ಮನೆಗೆ ಬರಬೇಕಿದ್ದ ವಿದ್ಯಾರ್ಥಿ ಮಸಣಕ್ಕೆ!

Tenth student drowns after going for a swim in the lake after special class
Posted By: Sagaradventure
Updated on: Nov 8, 2025 | 10:49 AM

ಭಟ್ಕಳ(ಉತ್ತರ ಕನ್ನಡ): ಭಟ್ಕಳ ತಾಲೂಕಿನ ದಿ ನ್ಯೂ ಇಂಗ್ಲಿಷ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಶನಿವಾರ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ವೆಂಕಟಾಪುರದ ಟ್ಯಾಕ್ಸಿ ಚಾಲಕ ಯೋಗೇಶ್ ಮೊಗೇರ್ ಅವರ ಪುತ್ರ ಶಶಿಧರ್ ಯೋಗೇಶ್ ಮೊಗೇರ್(16) ಎಂದು ಗುರುತಿಸಲಾಗಿದೆ.

ಇಂದು ಶಾಲೆಗೆ ರಜೆಯಿದ್ದರೂ ಸಹ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ತರಗತಿಯನ್ನು ಆಯೋಜಿಸಿದ್ದರು. ಮಧ್ಯಾಹ್ನ 12.45ಕ್ಕೆ ಶಾಲೆ ಮುಗಿದ ಬಳಿಕ, ಶಶಿಧರ್ ತನ್ನ ಐದಾರು ಸ್ನೇಹಿತರೊಂದಿಗೆ ಪಟ್ಟಣದ ಸೋನಾರಕೇರಿಯ ಜಂಬರ ಮಠದ ಕೆರೆಗೆ ಈಜಲು ಹೋಗಿದ್ದಾನೆ.

ದುರದೃಷ್ಟವಶಾತ್, ಶಶಿಧರನಿಗೆ ಸರಿಯಾಗಿ ಈಜಲು ಬರುತ್ತಿರಲಿಲ್ಲ. ಈಜು ಕಲಿಯಲು ಪ್ರಯತ್ನಿಸುವ ಭರದಲ್ಲಿ ಕೆರೆಗಿಳಿದಿದ್ದ ಶಶಿಧರ್ ಆಯತಪ್ಪಿ ಕೆರೆಯ ಆಳಕ್ಕೆ ಹೋಗಿದ್ದಾನೆ. ಅರ್ಧಂಬರ್ಧ ಈಜಲು ಗೊತ್ತಿದ್ದ ಕಾರಣ, ಆಳಕ್ಕೆ ಹೋದ ನಂತರ ಮೇಲೆ ಬರಲು ಸಾಧ್ಯವಾಗದೇ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಭಟ್ಕಳ ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಕೆರೆಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಭಟ್ಕಳ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Shorts Shorts