ಬೆಂಗಳೂರು: ಕನ್ನಡ ಚಿತ್ರರಂಗದ ನಟ ಹಾಗೂ ‘ಬಿಗ್ ಬಾಸ್ ಕನ್ನಡ’ ಸೀಸನ್ 11ರ (Bigg Boss Kannada’ Season 11) ಮಾಜಿ ಸ್ಪರ್ಧಿ ಉಗ್ರಂ ಮಂಜು (Ugram Manju)ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ಇತ್ತೀಚೆಗೆ ತಮ್ಮ ಬಹುಕಾಲದ ಗೆಳತಿ ಸಂಧ್ಯಾ (Sandhya.) ಅವರೊಂದಿಗೆ ನಿಶ್ಚಿತಾರ್ಥ (Engaged)ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸರಳ ಹಾಗೂ ಸಾಂಪ್ರದಾಯಿಕ ಸಮಾರಂಭದಲ್ಲಿ ಉಗ್ರಂ ಮಂಜು ಮತ್ತು ಸಂಧ್ಯಾ ಪರಸ್ಪರ ಉಂಗುರ ವಿನಿಮಯ ಮಾಡಿಕೊಂಡರು. ಉಭಯ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಚಿತ್ರರಂಗದಲ್ಲಿ ‘ಉಗ್ರಂ’ ಮಂಜು ಎಂದೇ ಖ್ಯಾತಿ ಪಡೆದಿರುವ ಮಂಜುನಾಥ್ ಅವರು, ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶಿಸಿದ ನಂತರ ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿದ್ದರು.
ಸಂಧ್ಯಾ ಅವರು ಚಿತ್ರರಂಗದ ಹಿನ್ನೆಲೆಯನ್ನು ಹೊಂದಿಲ್ಲ. ಮಂಜು ಅವರು ತಮ್ಮ ಬದುಕಿನ ಹೊಸ ಪಯಣದ ಕುರಿತು ಮಾತನಾಡಿ, “ಸಂಧ್ಯಾ ನನ್ನ ಜೀವನದ ಅತ್ಯಂತ ಪ್ರಮುಖ ಭಾಗವಾಗಲಿದ್ದಾರೆ. ಎಲ್ಲರ ಆಶೀರ್ವಾದದೊಂದಿಗೆ ನಮ್ಮ ಹೊಸ ಜೀವನ ಆರಂಭವಾಗಲಿದೆ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.






