ಬೆಂಗಳೂರು: ಕೊಲೆ ಮತ್ತು ಅಪಹರಣ (murder and kidnap) ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯ ಮೇಲೆ ಹೆಬ್ಬಗೋಡಿ ಪೊಲೀಸರು (Hebbagodi Police) ಫೈರಿಂಗ್ ನಡೆಸಿ ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ರವಿಪ್ರಸಾದ್ ರೆಡ್ಡಿ (Ravi Prasad Reddy) ಎಂದು ಗುರುತಿಸಲಾಗಿದೆ. ಹೆಬ್ಬಗೋಡಿ ಇನ್ಸ್‌ಪೆಕ್ಟರ್ ಸೋಮಶೇಖರ್ ನೇತೃತ್ವದಲ್ಲಿ ಪೊಲೀಸರು ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸ್ಮಶಾನದ ಬಳಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಆರೋಪಿಯು ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಅಥವಾ ಪ್ರತಿರೋಧ ಒಡ್ಡಲು ಯತ್ನಿಸಿದಾಗ, ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆತನ ಮೇಲೆ ಫೈರಿಂಗ್ ನಡೆಸಿ, ನಂತರ ಬಂಧಿಸಿದ್ದಾರೆ.
ಈತ ಉದ್ಯಮಿ ಬಾಲಪ್ಪ ರೆಡ್ಡಿ ಅವರನ್ನು ಕಿಡ್ನಾಪ್ ಮಾಡಿದ್ದ ಪ್ರಮುಖ ಆರೋಪಿಯಾಗಿದ್ದನು .ಅಪಹರಣದ ನಂತರ ಹಣ ನೀಡಲು ನಿರಾಕರಿಸಿದ್ದಕ್ಕೆ ಬಾಲಪ್ಪ ರೆಡ್ಡಿ ಅವರನ್ನು ಹತ್ಯೆ ಮಾಡಿದ್ದನು. ಇದಲ್ಲದೇ, ಈ ಹಿಂದೆ ಮಾದೇಶ ಎಂಬ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಸಹ ರವಿಪ್ರಸಾದ್ ರೆಡ್ಡಿ ಭಾಗಿಯಾಗಿದ್ದನು.
ಸದ್ಯ ಆರೋಪಿ ರವಿಪ್ರಸಾದ್ ರೆಡ್ಡಿ (Ravi Prasad Reddy) ಗಾಯಗೊಂಡಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಬ್ಬಗೋಡಿ ಪೊಲೀಸರು (Hebbagodi Police) ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.






