ಬೆಂಗಳೂರು: RSS ಯಾವುದೇ ರಾಜಕೀಯ (Politics) ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ. ರಾಜಕೀಯದಿಂದ ನಾವು ಸಂಪೂರ್ಣವಾಗಿ ಹೊರಗಡೆ ಇದ್ದೇವೆ. ಹಾಗೂ ಪಕ್ಷ ಅಥವಾ ವ್ಯಕ್ತಿಯ ಪರವಾಗಿ ನಿಲ್ಲದೇ, ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುವವರ ಜೊತೆ ಮಾತ್ರ ನಾವು ನಿಲ್ಲುತ್ತೇವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಯ ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದರು.
ರಾಜಕೀಯ ಸಂಬಂಧದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾತನಾಡಿ, ರಾಜಕೀಯದ ಜೊತೆ ಎಂದೂ ಗುರಿತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮುಂದುವರಿದು, RSS ಯಾಕೆ ಭಗವಾ ಧ್ವಜವನ್ನೇ ತನ್ನ ಸಂಕೇತವಾಗಿ ಬಳಸಿಕೊಂಡಿದೆ ಎಂಬ ಪ್ರಶ್ನೆಗೆ, “ಒಂದು ಸ್ವತಂತ್ರವಾದ ಹಾಗೂ ಶಾಶ್ವತವಾದ ಸಂಕೇತ ಇರಬೇಕು ಎಂದು ಸಂಘ ಬಯಸಿತ್ತು. ಭಗವಾ ಧ್ವಜ ಹಿಂದೂ ಧರ್ಮದ ಪ್ರತೀಕ, ಅದು ತ್ಯಾಗ, ಶಾಂತಿ, ಸತ್ಯದ ಸಂಕೇತ. ಆದ್ದರಿಂದ ಅದನ್ನೇ ಸಂಘದ ಶಾಶ್ವತ ಸಂಕೇತವಾಗಿ ಅಳವಡಿಸಿಕೊಂಡಿದ್ದೇವೆ” ಎಂದರು.
“1933ರಲ್ಲಿ ಧ್ವಜ ಸಮಿತಿ ರಾಷ್ಟ್ರ ಧ್ವಜದ ಬಗ್ಗೆ ಚರ್ಚೆ ಮಾಡಿತ್ತು. ಆಗ ಭಗವಾ ಧ್ವಜವನ್ನೇ ರಾಷ್ಟ್ರ ಧ್ವಜವನ್ನಾಗಿಸಬೇಕೆಂಬ ಅಭಿಪ್ರಾಯವೂ ಬಂದಿತ್ತು. ಆದರೆ ನಂತರ ಮಹಾತ್ಮ ಗಾಂಧೀಜಿ ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜವಾಗಿ ಮಾಡುವ ಸಲಹೆ ನೀಡಿದರು. ನಮ್ಮ ಸಂಘ ಗಾಂಧೀಜಿ (Gandhiji) ಯವರ ಅಭಿಪ್ರಾಯವನ್ನು ಗೌರವಿಸಿ ಅದನ್ನೇ ಒಪ್ಪಿಕೊಂಡಿತು,” ಎಂದು ಹೇಳಿದರು.






