ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2ರಲ್ಲಿ ನಮಾಜ್ ಸಲ್ಲಿಸುತ್ತಿರುವುದಕ್ಕೆ ರಾಜ್ಯ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಚಟುವಟಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅನುಮೋದನೆ ನೀಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿರುವ ವಿಜಯ್ ಪ್ರಸಾದ್, “ಇಂತಹ ಕೃತ್ಯಕ್ಕೆ ಹೇಗೆ ಅನುಮತಿ ನೀಡಲಾಗಿದೆ?” ಎಂದು ಪ್ರಶ್ನಿಸಿದ್ದಾರೆ. “ಅತ್ಯಂತ ಬಿಗಿ ಭದ್ರತೆಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ನಮಾಜ್ ಮಾಡಲು ಈ ವ್ಯಕ್ತಿಗಳು ಪೂರ್ವಾನುಮತಿ ಪಡೆದಿದ್ದಾರೆಯೇ? ಆರ್‌ಎಸ್‌ಎಸ್ (RSS) ಕಾನೂನುಬದ್ಧ ಅನುಮತಿ ಪಡೆದು ಪಥ ಸಂಚಲನ ನಡೆಸಲು ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತದೆ, ಆದರೆ ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳಿಗೆ ಏಕೆ ಕಣ್ಮುಚ್ಚಿ ಕುಳಿತಿದೆ?” ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಈ ವಿವಾದ ಹುಟ್ಟಿಕೊಂಡಿದೆ. ಆ ಆದೇಶವು ಆರ್‌ಎಸ್‌ಎಸ್ ನ್ನು ಗುರಿಯಾಗಿಸಿತ್ತು ಎಂದು ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ರಾಜ್ಯ ಸರ್ಕಾರದ ಆ ಆದೇಶಕ್ಕೆ ಹೈಕೋರ್ಟ್ ಈಗಾಗಲೇ ತಡೆಯಾಜ್ಞೆ ನೀಡಿದೆ.
ವಿಮಾನ ನಿಲ್ದಾಣದ ಮಾಹಿತಿ ಪ್ರಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಆವರಣದಲ್ಲಿ ಭದ್ರತಾ ತಪಾಸಣೆ ಪೂರ್ಣಗೊಂಡ ನಂತರ ಪ್ರಯಾಣಿಕರಿಗೆ ಲಭ್ಯವಾಗುವಂತೆ ಬಹುಧರ್ಮೀಯ ಪ್ರಾರ್ಥನಾ ಕೊಠಡಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಆದರೂ ಈ ರೀತಿ ಸಾರ್ವಜನಿಕವಾಗಿ ನಮಾಜ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.






