ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ (Parappana Agrahara Central Jail )ದಲ್ಲಿ ಕೈದಿಗಳಿಗೆ ಐಷಾರಾಮಿ ‘ರಾಜಾತಿಥ್ಯ’ ನೀಡುತ್ತಿರುವ ಮತ್ತು ಮೊಬೈಲ್ ಬಳಸುತ್ತಿರುವ ವಿಡಿಯೋಗಳು ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಜೈಲಿನ ಭದ್ರತಾ ಲೋಪಕ್ಕೆ ಹೊಣೆಗಾರರಾದ ಮೂವರು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (suspended) ಗೊಳಿಸಿ ಆದೇಶ ಹೊರಡಿಸಲಾಗಿದೆ.
ಜೈಲು ಸೂಪರಿಂಟೆಂಡೆಂಟ್ ಸುರೇಶ್ (Suresh), ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಮ್ಯಾಗೇರಿ (Mageri) ಹಾಗೂ ಅಧಿಕಾರಿ ಅಶೋಕ್ ಭಜಂತ್ರಿ (Ashok Bhajantri) ಅವರನ್ನು ಅಮಾನತು (suspended)ಗೊಳಿಸಲಾಗಿದೆ.
ಈ ಘಟನೆಗಳ ಕುರಿತಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr. G. Parameshwara) ಅವರು ಹಿರಿಯ ಜೈಲಾಧಿಕಾರಿಗಳ ಸಭೆ ನಡೆಸಿ, “ಇದು ನಾನ್ಸೆನ್ಸ್, ಇಂತಹದ್ದನ್ನೆಲ್ಲ ಸಹಿಸಲು ಆಗಲ್ಲ. ಪದೇ ಪದೇ ಈ ರೀತಿ ಆಗುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಆಗಲೇಬೇಕು,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೈರಲ್ ವಿಡಿಯೋ (viral videos) ಗಳ ಪೈಕಿ ಕೆಲವೊಂದು ವಿಡಿಯೋಗಳು 2023 ರಲ್ಲೇ ಚಿತ್ರೀಕರಿಸಲ್ಪಟ್ಟಿವೆ ಮತ್ತು ಇನ್ನು ಒಂದೆರಡು ವಿಡಿಯೋಗಳು ಕೇವಲ 4 ತಿಂಗಳ ಹಿಂದೆ ಆಗಿವೆ ಎಂಬ ಪ್ರಾಥಮಿಕ ಮಾಹಿತಿ ಇದೆ. ಹಾಗೂ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿ ವರದಿ ನೀಡಲು ಒಂದು ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ವರದಿ ಬಂದ ಬಳಿಕ ಮುಂದಿನ ಉನ್ನತ ಮಟ್ಟದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.






