ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಅಕ್ರಮ ಗೋ ಹತ್ಯೆ ಮತ್ತು ಗೋ ಸಾಗಾಟ (transportation) ತಡೆಗಟ್ಟಲು ಪೊಲೀಸರು ಹೊಸ ಪ್ರಯೋಗ ಕೈಗೊಂಡಿದ್ದಾರೆ. ಆದರೆ ಈ ಪ್ರಯತ್ನ ಇದೀಗ ವಿವಾದಕ್ಕೆ (controversy) ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯವರು ಗೋ ಹತ್ಯೆ ಪ್ರತಿಬಂಧಕ ಕಾಯಿದೆ ಕುರಿತು ಧಾರ್ಮಿಕ ಕೇಂದ್ರಗಳಲ್ಲಿ ಜಾಗೃತಿ ಮೂಡಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಎಸ್ಪಿ ಡಾ. ಅರುಣ್ (Superintendent of Police Dr. Arun,) ಅವರ ಸೂಚನೆಯ ಮೇರೆಗೆ ಬೆಳ್ತಂಗಡಿ, ಸುಳ್ಯ, ಮೊಗರ್ಪಣೆ, ದುಗಲಡ್ಕ, ಕುಂಭಕ್ಕೋಡು ಸೇರಿದಂತೆ ಹಲವು ಮಸೀದಿಗಳಲ್ಲಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಪೊಲೀಸರು ಮಸೀದಿಗಳಲ್ಲಿ ಮುಸ್ಲಿಂ ಮುಖಂಡರಿಗೆ ಹಾಗೂ ಯುವಕರಿಗೆ ಕಾಯ್ದೆಯ ಕುರಿತು ತಿಳಿಸಿ, ಗೋಹತ್ಯೆ ಹಾಗೂ ಅಕ್ರಮ ಸಾಗಾಟ ತಡೆಯಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಈ ಕ್ರಮವು ಈಗ ರಾಜಕೀಯ ತಾಪಮಾನ ಏರಿಸಿದೆ. ಸಿಪಿಐಎಂ (CPI(M)ಮತ್ತು ಎಸ್ಡಿಪಿಐ (SDPI) ಪಕ್ಷಗಳು ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಘಟನೆಗಳು “ಕಾಯ್ದೆಯ ಜಾಗೃತಿಯನ್ನು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿರುವುದು ಸಂವಿಧಾನ ತಟಸ್ಥತೆಯ ಉಲ್ಲಂಘನೆ” ಎಂದು ಆರೋಪಿಸಿ ಐಜಿಪಿ (Inspector General of Police) ಗೆ ದೂರು ಸಲ್ಲಿಸಿವೆ.
ದೂರಿನಲ್ಲಿ, “ಪೊಲೀಸರು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದ ಜನರನ್ನು ನಿಲ್ಲಿಸಿ, ಗೋಹತ್ಯೆ ಕಾಯ್ದೆ ಉಲ್ಲಂಘಿಸಿದರೆ ಮನೆಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು,” ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವರು, “ಜನಜಾಗೃತಿ ಕಾರ್ಯಕ್ರಮಗಳು ಅಗತ್ಯವಾದರೂ, ಅವು ಧಾರ್ಮಿಕ ಸ್ಥಳಗಳಲ್ಲಿ ನಡೆಸಬಾರದು. ಎಲ್ಲ ಸಮುದಾಯಗಳು ಸೇರಬಹುದಾದ ತಟಸ್ಥ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಬೇಕು,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.






