ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರು ತಮ್ಮ ವಿರುದ್ಧ ದಾಖಲಾಗಿರುವ 60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಎಫ್‌ಐಆರ್ ರದ್ದುಪಡಿಸುವ ಜೊತೆಗೆ, ಪೊಲೀಸರು ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸದಂತೆ ಮತ್ತು ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿರ್ದೇಶನ ನೀಡಬೇಕೆಂದು ದಂಪತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಅರ್ಜಿಗಳು ಸೋಮವಾರ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕದ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದವು. ನ್ಯಾಯಾಲಯವು ದಂಪತಿಗೆ ದೂರುದಾರ ದೀಪಕ್ ಕೋಠಾರಿಯವರಿಗೆ ಅರ್ಜಿಯ ಪ್ರತಿಯನ್ನು ಒದಗಿಸುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿದೆ.
ಕೋಠಾರಿ ಅವರು ದಂಪತಿ ವಿರುದ್ಧ ದೂರು ದಾಖಲಿಸಿದ್ದು, 2015 ರಿಂದ 2023ರ ಅವಧಿಯಲ್ಲಿ ಅವರ ಒಡೆತನದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ (Best Deal TV Pvt Ltd) ಕಂಪನಿಯಲ್ಲಿ 60 ಕೋಟಿ ರೂ. ಹೂಡಿಕೆ ಮಾಡಲು ಪ್ರೇರೇಪಿಸಿದರು, ಆದರೆ ಆ ಹಣವನ್ನು ಅವರು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ತಮ್ಮ ಅರ್ಜಿಯಲ್ಲಿ ದೂರುದಾರರ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ಎಫ್‌ಐಆರ್ ನ್ನು ಸುಳ್ಳು ಮತ್ತು ತಿರುಚಿದ ಸಂಗತಿಗಳ ಆಧಾರದ ಮೇಲೆ, ಹಣ ಸುಲಿಗೆ ಮಾಡುವ ದುರುದ್ದೇಶದಿಂದ ದಾಖಲಿಸಲಾಗಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ, ತಾವು ಕಂಪನಿಯ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ ಮತ್ತು ಬಹಳ ಸೀಮಿತ ಅವಧಿಗೆ ಮಾತ್ರ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.






