ಭಟ್ಕಳ: ಕಡಲತೀರದಲ್ಲಿನ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆಯನ್ನು ಲೆಕ್ಕಿಸದೇ ಸಮುದ್ರಕ್ಕಿಳಿದು ಮನಬಂದಂತೆ ಮೋಜು ಮಸ್ತಿ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸರು ಹಾಗೂ ಸ್ಥಳೀಯರು ಎಚ್ಚರಿಕೆ ನೀಡಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ ಘಟನೆ ತಾಲ್ಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ.
ಬುಧವಾರ ಶಿವಮೊಗ್ಗ ಜಿಲ್ಲೆಯ ಮೂಲದ ಸುಮಾರು ಹತ್ತಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳ ತಂಡ ಮುರ್ಡೇಶ್ವರ ಪ್ರವಾಸಕ್ಕೆ ಬಂದಿದೆ. ಇಲ್ಲಿನ ಕಡಲತೀರಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಏಕಾಏಕಿ ನೀರಿಗಿಳಿದು, ಅಲೆಗಳ ಅಬ್ಬರವನ್ನೂ ಲೆಕ್ಕಿಸದೇ ಅಪಾಯಕಾರಿ ರೀತಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು.
ಈ ವೇಳೆ ವಿದ್ಯಾರ್ಥಿಗಳನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ವಾಪಸ್ಸಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ವಿದ್ಯಾರ್ಥಿಗಳು ಜೀವರಕ್ಷಕ ಸಿಬ್ಬಂದಿ ಮಾತು ಲೆಕ್ಕಿಸದೇ ಸಮುದ್ರದಲ್ಲಿ ಆಟ ಮುಂದುವರೆಸಿದ್ದು ಅಪಾಯಕಾರಿಯಾಗಿ ಮುಂದಕ್ಕೆ ತೆರಳಿದ್ದರು.
ವಿದ್ಯಾರ್ಥಿಗಳು ಅಪಾಯದ ಮಟ್ಟಕ್ಕೆ ಹೋಗಿರುವುದನ್ನು ಅರಿತ ತಕ್ಷಣ ಓಶಿಯನ್ ಅಡ್ವೆಂಚರ್ ಬೋಟಿಂಗ್ ಸಿಬ್ಬಂದಿ ಹಾಗೂ ಕರಾವಳಿ ಕಾವಲು ಪಡೆಯ ಎ.ಎಸ್.ಐ. ಎಂ.ಬಾಡ್ಕರ್ ಅವರ ನೇತೃತ್ವದ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿ ಸತತ ಅರ್ಧಗಂಟೆಗಳ ಕಾಲ ಮೈಕ್ ಮೂಲಕ ಅವರಿಗೆ ವಾಪಸ್ ದಡಕ್ಕೆ ಬರುವಂತೆ ಮನವಿ ಮಾಡಲಾಯಿತು.
ವಿದ್ಯಾರ್ಥಿಗಳು ತೀರಕ್ಕೆ ಬಂದ ಬಳಿಕ ನೀರಿನಲ್ಲಿ ನಿರ್ಲಕ್ಷ್ಯದಿಂದ ವರ್ತನೆ ಮಾಡದಂತೆ ಎಚ್ಚರಿಕೆ ನೀಡಿದ್ದು, ಅವರ ಮಾಹಿತಿ ಪಡೆದು ವಾಪಸ್ ನೀರಿಗಿಳಿಯದಂತೆ ಎಚ್ಚರಿಸಿ ವಾಪಸ್ ಕಳುಹಿಸಲಾಗಿತು.






