ಕಾರವಾರ(ಉತ್ತರಕನ್ನಡ): ಸಮಾಜವಾದಿ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಸಮಾಜವಾದವನ್ನು ಬಂಡವಾಳ ಮಾಡಿಕೊಂಡು ‘ಮಜಾವಾದಿ’ಯಂತೆ ವರ್ತಿಸುತ್ತಿದ್ದಾರೆ. ಈ ಮಜಾವಾದಿ ಸರ್ಕಾರ ಬಂದಾಗಿನಿಂದ, ದೇಶ ವಿರೋಧಿಗಳು ಮತ್ತು ಬಾಂಬ್ ಇಡುವಂತಹ ಭಯೋತ್ಪಾದಕರಿಗೆ ‘ನಮ್ಮ ಸರ್ಕಾರ ಬಂದಿದೆ’ ಎಂಬ ಖುಷಿ ಸಿಕ್ಕಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹೆಗಡೆ ಹರ್ತೆಬೈಲ್ ಆರೋಪಿಸಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕರಿಗೆ, ಪಾತಕಿಗಳಿಗೆ ರಾಜಾತಿಥ್ಯ ನೀಡುತ್ತಿರುವುದನ್ನು ಖಂಡಿಸಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು, ಜಿಲ್ಲಾ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ್ ನಾಯಕ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡವರು ಇಂದು ಜೈಲಿನಲ್ಲಿ ಆರಾಮವಾಗಿ ಕುಳಿತು ಟಿವಿ ನೋಡುವಂತಹ ಪರಿಸ್ಥಿತಿ ಇದೆ. ಇಷ್ಟು ದಿನ ಕಾಂಗ್ರೆಸ್ ಸರ್ಕಾರ ಗಳಿಸಿದ್ದ ಬಿರುದುಗಳಿಗೆ ಈ ಮೂಲಕ ಇನ್ನೊಂದು ಗರಿ ಸೇರಿದಂತಾಗಿದೆ. ಅವರ ಸಮಾಜವಾದ ಹೇಗೆ ರಾಜಕೀಯ ಲೆಕ್ಕಾಚಾರವನ್ನು ಟ್ರಿಗರ್ ಮಾಡಿದೆ ಎನ್ನುವುದಕ್ಕೆ ಸಿಎಂ ಮಾತೇ ಸಾಕ್ಷಿ, ದೆಹಲಿಯಲ್ಲಿ ಬ್ಲಾಸ್ಟ್ ಆಗಿದ್ದು ಇಡೀ ದೇಶ ಬೇಸರಗೊಂಡಿದ್ದರೆ, ಸಿದ್ದರಾಮಯ್ಯ ಮಾತ್ರ, ಇದು ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಕ್ಕೆ ಹೆಚ್ಚು ಸೀಟು ತಂದುಕೊಡಲಿದೆ ಎಂದಿದ್ದಾರೆ, ಇದು ವಿಕೃತಿಯಲ್ಲವೇ ಎಂದು ಟೀಕೆ ವ್ಯಕ್ತಪಡಿಸಿದರು.
ಇನ್ನು, ರಸ್ತೆಗಳ ದುಸ್ಥಿತಿ ಕುರಿತು ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ, ರಾಷ್ಟ್ರೀಯ ಹೆದ್ದಾರಿಗಳನ್ನು ಹೊರತುಪಡಿಸಿ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ರಸ್ತೆಗಳ ನಿರ್ವಹಣೆಯೇ ಇಲ್ಲ. ಸರಿಯಾದ ರಸ್ತೆ ಕೊಡಲು ಆಗದ ಈ ಸರ್ಕಾರಕ್ಕೆ ಇಂದು ಜನ ಶಾಪ ಹಾಕುತ್ತಿದ್ದಾರೆ. ‘ಯಾಕಾದರೂ ಈ ಕಾಂಗ್ರೆಸ್ ಸರ್ಕಾರ ಬಂತು’ ಎಂದು ಜನರು ಯೋಚಿಸುವ ಪರಿಸ್ಥಿತಿ ಬಂದಿದೆ, ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಕಾರಾಗ್ರಹ ಪರಪ್ಪನ ಅಗ್ರಹಾರ, ಕಾಂಗ್ರೆಸ್ ಆಡಳಿತದಲ್ಲಿ ರೆಸಾರ್ಟ್ ಆಗಿ ಮಾರ್ಪಟ್ಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಬೀಡಿ, ಸಿಗರೇಟ್, ಗುಂಡು-ತುಂಡು, ಮೊಬೈಲ್ ಎಲ್ಲವನ್ನೂ ಅಪರಾಧಿಗಳಿಗೆ ಲಭ್ಯವಾಗಿಸಿದ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಬಳಿಕ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ ಅವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾರವಾರ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಜಿಲ್ಲಾ ವಿಶೇಷ ಆಹ್ವಾನಿತರಾದ ಮನೋಜ ಭಟ್, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಹಳ್ಳೇರ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.






