ಮಂಡ್ಯ: ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ‘ತಿಥಿ’ಯ (Thithi)ಮೂಲಕ ಖ್ಯಾತಿ ಗಳಿಸಿದ್ದ ಹಿರಿಯ ಕಲಾವಿದ ಗಡ್ಡಪ್ಪ (89) (ಅವರ ಮೂಲ ಹೆಸರು ಚನ್ನೇಗೌಡ) ಅವರು ಇಂದು ನಿಧನರಾಗಿದ್ದಾರೆ.
ಗಡ್ಡಪ್ಪ Gaddappa) ಅವರು ಕಳೆದ ಕೆಲವು ತಿಂಗಳಿಂದ ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಅಲ್ಲದೆ, ಒಂದು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದಲ್ಲಿ ಅವರು ಸಾವನ್ನಪ್ಪಿದ್ದಾರೆ.
ಚನ್ನೇಗೌಡರು ‘ತಿಥಿ’ ಸಿನಿಮಾದಲ್ಲಿನ ‘ಗಡ್ಡಪ್ಪ’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಈ ಪಾತ್ರವು ಅವರಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿತ್ತು. ‘ತಿಥಿ’ ಜೊತೆಗೆ ‘ತರ್ಲೆ ವಿಲೇಜ್’ (arle Village), ‘ಜಾನಿ ಮೇರಾ ನಾಮ್’ (Johnny Mera Naam), ‘ಹಳ್ಳಿ ಪಂಚಾಯಿತಿ’ (Halli Panchayat.) ಸೇರಿದಂತೆ ಸುಮಾರು 8 ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.
ಅಂತ್ಯಕ್ರಿಯೆಯು ಇಂದು ಸಂಜೆ ಅವರ ಸ್ವಗ್ರಾಮ ನೊದೆ ಕೊಪ್ಪಲಿನಲ್ಲಿ ನಡೆಯಲಿದೆ ಎಂದು ಅವರ ಪುತ್ರಿ ಶೋಭಾ ಅವರು ಮಾಹಿತಿ ನೀಡಿದ್ದಾರೆ.






