ಹಾವೇರಿ: ಕಟ್ಟಿಗೆ ಕಡಿದು ಜೀವನ ಸಾಗಿಸುತ್ತಿದ್ದ ವಯೋವೃದ್ಧರೊಬ್ಬರು, ತಮ್ಮ ಬದುಕಿನ ಆಧಾರವಾಗಿದ್ದ ಕೊಡಲಿ (Axe)ಯನ್ನು ವಾಪಸ್ ಕೊಡಿಸುವಂತೆ ಕೋರಿ ಪೊಲೀಸ್ ಠಾಣೆಗೆ ಬಂದ ಮನಕಲಕುವ ಘಟನೆಯೊಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ.
ರಾಣೇಬೆನ್ನೂರು ( Ranebennur)ತಾಲೂಕಿನ ಗುಡಗೂರು ಗ್ರಾಮದ ಸುಮಾರು 70 ವರ್ಷದ (70-year-old) ವಯೋವೃದ್ಧರೊಬ್ಬರು, ಪಕ್ಕದ ಮನೆಯ ವ್ಯಕ್ತಿ ತಮ್ಮ ಕಟ್ಟಿಗೆ ಕಡಿಯುವ ಕೊಡಲಿ (Axe)ಯನ್ನು ತೆಗೆದುಕೊಂಡಿದ್ದು, ಕೇಳಿದರೂ ವಾಪಸ್ ಕೊಡುತ್ತಿಲ್ಲ ಎಂದು ದೂರು ನೀಡಲು ಠಾಣೆಗೆ ಬಂದಿದ್ದರು.
ಠಾಣೆಯ ಹೆಡ್ ಕಾನ್‌ಸ್ಟೇಬಲ್ (Head Constable) ಹಾಲೇಶ ಮೇಗಳಮನಿ (Halesh Megalamani) ಅವರು ವೃದ್ಧರ ಮುಗ್ಧತೆ ಮತ್ತು ಅವರ ಪರಿಸ್ಥಿತಿ ಕಂಡು, ಕೂಡಲೇ ಅವರು ಕೊಡಲಿ ತೆಗೆದುಕೊಂಡ ವ್ಯಕ್ತಿಯಿಂದ ಮಾಹಿತಿ ಪಡೆದು, ಗ್ರಾಮದ ಮುಖಂಡರೊಂದಿಗೆ ಮಾತನಾಡಿಸಿ, ವೃದ್ಧರಿಗೆ ಅವರ ಕೊಡಲಿಯನ್ನು ವಾಪಸ್ ಕೊಡಿಸಿದರು.
ನಂತರ ಪೊಲೀಸ್ ಸಿಬ್ಬಂದಿ ವಯೋವೃದ್ಧರಿಗೆ ನೀರು, ಬಿಸ್ಕೆಟ್ ಕೊಡಿಸಿ, ಠಾಣೆಯಿಂದ ಪೋಸ್ಟ್ ಸರ್ಕಲ್ ವರೆಗೆ ಆಟೋ ಮಾಡಿಸಿ ಕಳುಹಿಸಿಕೊಟ್ಟರು.
ಸಣ್ಣ ವಿಷಯವಾದರೂ, ವೃದ್ಧರ ಉಪಜೀವನಕ್ಕೆ ನೆರವಾಗುವ ಮೂಲಕ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ (Ranebennur Rural Police) ಠಾಣೆಯ ಸಿಬ್ಬಂದಿ ತೋರಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.






