ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಳ್ಳುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪ್ರಮುಖ ಸುತ್ತೋಲೆಯನ್ನು ಹೊರಡಿಸಿದೆ. ಈ ಸಮೀಕ್ಷೆಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆ ಮತ್ತು ಮಂಡಳಿಗಳ ಅಧಿಕಾರಿಗಳು, ನೌಕರರು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಪಡೆದ ವಿದ್ಯಾರ್ಥಿಗಳ ವಿವರಗಳನ್ನು ಕಡ್ಡಾಯವಾಗಿ ಒದಗಿಸುವಂತೆ ಸೂಚಿಸಲಾಗಿದೆ.
ಈ ಸಂಬಂಧ ದಿನಾಂಕ: 18.10.2025 ರಂದು ಆಯೋಗದ ಪತ್ರ ಮತ್ತು ದಿನಾಂಕ: 29.10.2025 ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅರೆಸರ್ಕಾರಿ ಪತ್ರವನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಆಯೋಗದ ಮನವಿಯ ಮೇರೆಗೆ, ರಾಜ್ಯ ಸರ್ಕಾರವು ತನ್ನ ವಿವಿಧ ಇಲಾಖೆ, ನಿಗಮ, ಮಂಡಳಿ ಮತ್ತು ಸಂಸ್ಥೆಗಳಲ್ಲಿನ ನೌಕರರ ವರ್ಗವಾರು ಮಾಹಿತಿ ಹಾಗೂ ಮೀಸಲಾತಿ ವಿದ್ಯಾರ್ಥಿಗಳ ವಿವರವನ್ನು ಇಲಾಖಾ ಮುಖ್ಯಸ್ಥರಿಗೆ ನಿರ್ದೇಶನ ನೀಡುವ ಮೂಲಕ ಸಂಗ್ರಹಿಸಲು ಮುಂದಾಗಿದೆ. ಆಯೋಗದ ವೆಬ್‌ಸೈಟ್ (kscbc.karnataka.gov.in) ನಲ್ಲಿ ಅಭಿವೃದ್ಧಿಪಡಿಸಲಾಗಿರುವ ವಿಶೇಷ ವೆಬ್ ಪೋರ್ಟಲ್‌ನಲ್ಲಿ ಈ ಮಾಹಿತಿಯನ್ನು ದಾಖಲಿಸಬೇಕಿದೆ.
ಇಲಾಖೆ, ನಿಗಮ, ಮಂಡಳಿ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದವಾರು ಸಂಖ್ಯೆಯ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಅನುಕೂಲವಾಗುವಂತೆ ಆಯಾ ಇಲಾಖೆಗಳಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ನಿರ್ದೇಶಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಆಯುಕ್ತಾಲಯ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಕರ್ನಾಟಕ ರಾಜ್ಯ ಪರೀಕ್ಷಾ ಮೌಲ್ಯಮಾಪನ ಮತ್ತು ಪರಿಕ್ಷಾ ಮಂಡಳಿ, ಹಾಗೂ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಕಚೇರಿಗಳು ಈ ದತ್ತಾಂಶ ಸಂಗ್ರಹಣೆಯಲ್ಲಿ ಭಾಗಿಯಾಗಲಿವೆ. ಈ ಎಲ್ಲಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಪ್ರವರ್ಗಗಳಿಗೆ ಸೇರಿರುವ ಅಧಿಕಾರಿ, ನೌಕರರು ಮತ್ತು ಮೀಸಲಾತಿ ಪಡೆದ ವಿದ್ಯಾರ್ಥಿಗಳ ಜಾತಿ, ಪ್ರವರ್ಗಗಳ ಕುರಿತು ಮಾಹಿತಿ ಸಂಗ್ರಹಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶದ ಮೂಲಕ ಮಾಹಿತಿಯನ್ನು ಕ್ರೋಢೀಕರಿಸಿ, ಇಲಾಖೆಯ ಒಟ್ಟಾರೆ ವೃಂದವಾರು ಸಂಖ್ಯೆಯನ್ನು ನಮೂದಿಸಬೇಕಾಗಿದೆ.
ಈ ಸಮೀಕ್ಷೆಯ ದತ್ತಾಂಶವನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಒದಗಿಸುವ ಸಲುವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಪ್ರಮುಖ ಇಲಾಖೆ/ಮಂಡಳಿಗಳಿಗೆ ನೋಡಲ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ. ಈ ನೇಮಕಾತಿಯ ಮೂಲಕ ಸಮೀಕ್ಷೆಗೆ ಅಗತ್ಯವಾದ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ಒದಗಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ.






