ಕಲಬುರಗಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತೀವ್ರ ಚರ್ಚೆಗೊಳಗಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh ) ಚಿತ್ತಾಪುರ (Chitrapur) ಪಥಸಂಚಲನಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದ ನಂತರ ಹೈಕೋರ್ಟ್ ಮೆಟ್ಟಿಲೇರಿದ್ದ ಆರ್ ಎಸ್ ಎಸ್ ಗೆ ಷರತ್ತುಬದ್ಧ ಅನುಮತಿ ನೀಡುವ ಮೂಲಕ ಹೈಕೋರ್ಟ್‌ನ (High Court) ಕಲಬುರಗಿ ಪೀಠವು ಈ ವಿವಾದಕ್ಕೆ ತೆರೆ ಎಳೆದಿದೆ.
ನವೆಂಬರ್ 16, ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ತನಕ ಪಥಸಂಚಲನಕ್ಕೆ ಅವಕಾಶ ನೀಡಲಾಗಿದ್ದು, ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ (Justice M.G.S. Kamal) ಅವರಿದ್ದ ಏಕ ಸದಸ್ಯ ಪೀಠವು ಪಥಸಂಚಲನದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ನಿರ್ಬಂಧಿಸಿದೆ. 300 ಗಣವೇಷಧಾರಿಗಳು ಹಾಗೂ 50 ಘೋಷ್ ವೃಂದದವರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.
ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ (Ashok Patil) ಅವರು ಈ ಹಿಂದೆ ಅಕ್ಟೋಬರ್ 19ಕ್ಕೆ ಅನುಮತಿ ಕೋರಿದ್ದರು. ಆದರೆ, ಅದೇ ದಿನ ಇನ್ನೆರಡು ಸಂಘಟನೆಗಳು ಅನುಮತಿ ಕೇಳಿದ್ದರಿಂದ ತಹಶೀಲ್ದಾರ್ (Tahsildar) ಅನುಮತಿ ನಿರಾಕರಿಸಿದ್ದರು. ಆಡಳಿತದ ನಿರಾಕರಣೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಆರ್‌ಎಸ್‌ಎಸ್‌ಗೆ ನ್ಯಾಯಾಲಯದ ಈ ತೀರ್ಪು ದೊಡ್ಡ ರಿಲೀಫ್ ನೀಡಿದೆ.






