ಚೀನೀ ವಾಹನ ತಯಾರಕರಲ್ಲಿ ಪ್ರಮುಖವಾದ ಚೆರಿ(Chery) ಕಂಪನಿಯು, ತಮ್ಮ ಎಸ್‌ಯುವಿಯ ಮೂಲಕ, ರೇಂಜ್ ರೋವರ್‌ನ ವೈರಲ್ ‘ಸ್ವರ್ಗದ ಮೆಟ್ಟಿಲು'(Stairway to Heaven) ಸಾಹಸವನ್ನು ಮರುಸೃಷ್ಟಿಸಲು ಪ್ರಯತ್ನಿಸಿ ವಿಫಲವಾಗಿದೆ.
ಬುಧವಾರ, ಚೆರಿ ಕಂಪನಿಯ ಆರೆಂಜ್ ಎಸ್‌ಯುವಿ, ರೇಂಜ್ ರೋವರ್‌ನ ಪ್ರಸಿದ್ಧ ಸಾಹಸವನ್ನು ಪುನರಾವರ್ತಿಸಲು ಟಿಯಾನ್‌ಮೆನ್ ಪರ್ವತ ರಾಷ್ಟ್ರೀಯ ಅರಣ್ಯ ಉದ್ಯಾನವನದ ಕಡಿದಾದ ಮೆಟ್ಟಿಲುಗಳನ್ನು ಏರಲು ಪ್ರಯತ್ನಿಸಿತು. ಸುಮಾರು 45-ಡಿಗ್ರಿ ಇಳಿಜಾರಿನ ಈ ಪುರಾತನ ಮೆಟ್ಟಿಲುಗಳ ಮೇಲೆ, ಕಾರು ಬಹುತೇಕ ತುದಿಯನ್ನು ತಲುಪುವ ಹಂತದಲ್ಲಿ ಜಾರಲು ಪ್ರಾರಂಭಿಸಿತು. ನಿಯಂತ್ರಣ ಕಳೆದುಕೊಂಡ ಎಸ್‌ಯುವಿ ಅಂತಿಮವಾಗಿ ಭದ್ರತಾ ರೇಲಿಂಗ್‌ನ ಒಂದು ಭಾಗಕ್ಕೆ ಡಿಕ್ಕಿಯಾಗಿ ನಿಂತಿದೆ.
ಕಳೆದ 2018ರಲ್ಲಿ, ಲ್ಯಾಂಡ್ ರೋವರ್(Land Rover) ಕಂಪನಿಯು ತನ್ನ ರೇಂಜ್ ರೋವರ್ ಸ್ಪೋರ್ಟ್ ಪ್ಲಗ್-ಇನ್ ಹೈಬ್ರಿಡ್ (PHEV) ಕಾರಿನ ಸಾಮರ್ಥ್ಯವನ್ನು ಪ್ರದರ್ಶಿಸಲು ಟಿಯಾನ್‌ಮೆನ್ ಪರ್ವತದಲ್ಲಿ ಈ ಪ್ರಸಿದ್ಧ ಸಾಹಸವನ್ನು ನಡೆಸಿತ್ತು. ರೇಂಜ್ ರೋವರ್ ಸ್ಪೋರ್ಟ್, 45-ಡಿಗ್ರಿ ಇಳಿಜಾರಿನಲ್ಲಿದ್ದ 999 ಕಲ್ಲಿನ ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದು ರೇಂಜ್ ರೋವರ್ ಸ್ಪೋರ್ಟ್ PHEV ಹಿಂದಿನ ಇಂಜಿನಿಯರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು.
ಆದರೆ ಚೀನೀ ವಾಹನ ತಯಾರಕ ಚೆರಿ ಮಾಡಿದ ಸಾಹಸದ ಮರುಸೃಷ್ಟಿ ವಿಫಲವಾಯಿತು. ಈ ಅನಾಹುತಕ್ಕೆ ಸಂಬಂಧಿಸಿದಂತೆ ಚೆರಿ ಆಟೋಮೊಬೈಲ್ ವೀಬೋದಲ್ಲಿ (Weibo) ಹೇಳಿಕೆಯನ್ನು ಪೋಸ್ಟ್ ಮಾಡಿ ಕ್ಷಮೆಯಾಚಿಸಿದೆ.
ಕಂಪನಿಯು ನೀಡಿದ ವಿವರಣೆಯ ಪ್ರಕಾರ, ಪರೀಕ್ಷಾ ವಾಹನಕ್ಕೆ ಕಟ್ಟಿದ್ದ ಸುರಕ್ಷತಾ ಹಗ್ಗದ(safety rope) ಜೋಡಣೆ ಅನಿರೀಕ್ಷಿತವಾಗಿ ಬಿಚ್ಚಿಹೋಗಿದೆ. ಪರಿಣಾಮವಾಗಿ, ಹಗ್ಗವು ಕಾರಿನ ಬಲ ಚಕ್ರದ ಸುತ್ತ ಸುತ್ತಿಕೊಂಡ ಪರಿಣಾಮ ಕಾರು ನಿಯಂತ್ರಣ ತಪ್ಪಿ, ಮೆಟ್ಟಿಲುಗಳ ಮೇಲೆ ಜಾರಿ ರೇಲಿಂಗ್‌ಗೆ ಅಪ್ಪಳಿಸಿದೆ.
“ಅದೃಷ್ಟವಶಾತ್, ಈ ಅಪಘಾತದಿಂದ ಯಾವುದೇ ವೈಯಕ್ತಿಕ ಗಾಯಗಳು ಅಥವಾ ನೈಸರ್ಗಿಕ ಪರಿಸರಕ್ಕೆ ಹಾನಿಯಾಗಿಲ್ಲ,” ಎಂದು ಕಂಪನಿಯು ತಿಳಿಸಿದೆ. ಸಾಂಪ್ರದಾಯಿಕ ಪ್ರವಾಸಿ ತಾಣಕ್ಕೆ ಉಂಟಾದ ಹಾನಿಗಾಗಿ ಕಂಪನಿಯು ಕ್ಷಮೆಯಾಚಿಸಿದ್ದು, ಅದನ್ನು ಸಂಪೂರ್ಣವಾಗಿ ದುರಸ್ತಿ ಮಾಡುವುದಾಗಿ ಭರವಸೆ ನೀಡಿದೆ.
Chinese automaker tries recreating the viral Range Rover "Stairway to Heaven" climb, crashes through guardrail
byu/jessexknight infuckcars






