ಬೆಂಗಳೂರು: ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಆರೋಪಗಳಿಗೆ ಬಲ ನೀಡುವಂತೆ, ಸಿಸಿಬಿ ವಿಶೇಷ ದಳ ನಡೆಸಿದ ದಾಳಿಯಿಂದ ಸ್ಥಳೀಯ ಪೊಲೀಸರ ಅಸಮರ್ಪಕ ಕಾರ್ಯವೈಖರಿ ಮತ್ತೊಮ್ಮೆ ಬಹಿರಂಗವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪಬ್-ಬಾರ್‌ಗಳಲ್ಲಿ ಮಾದಕ ದ್ರವ್ಯ ಸೇವನೆ, ಕೋರಮಂಗಲದಲ್ಲಿ ವೇಶ್ಯವಾಟಿಕೆ ಜೋರಾಗಿ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ವೀಡಿಯೋಗಳು ವೈರಲ್ ಆಗಿದ್ದವು. ಹಲವು ವ್ಲಾಗರ್‌ಗಳು ಕೂಡ ಅನೈತಿಕ ಚಟುವಟಿಕೆಗಳ ಅನಾವರಣ ನಡೆಸಿ, ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರಶ್ನೆ ಎತ್ತಿದ್ದರು.
ಇನ್ನು ಇದಕ್ಕೆ ಪುಷ್ಟಿ ನೀಡುವಂತೆ ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ ಅನಧಿಕೃತ ಜೂಜಾಟ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದು ದೃಢಪಟ್ಟಿದ್ದು, ಇವೆಲ್ಲ ಗೊತ್ತಿದ್ದು ಕೂಡ ಕೋರಮಂಗಲ ಪೊಲೀಸರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯನ್ನ ಅಮಾನತು ಮಾಡಿ ನೈರುತ್ಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಆದೇಶಿಸಿದ್ದಾರೆ.






