Home State Politics National More
STATE NEWS

2026ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ!

List of government holidays for 2026 announced
Posted By: Sagaradventure
Updated on: Nov 14, 2025 | 5:32 PM

ಬೆಂಗಳೂರು: ​ಕರ್ನಾಟಕ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರ ಬಹುನಿರೀಕ್ಷಿತ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸ ವರ್ಷದಲ್ಲಿ ರಾಷ್ಟ್ರೀಯ ಹಬ್ಬಗಳು, ಪ್ರಾದೇಶಿಕ ಹಬ್ಬಗಳು ಸೇರಿದಂತೆ ಒಟ್ಟು 20 ಸಾರ್ವತ್ರಿಕ ರಜಾ ದಿನಗಳನ್ನು ಘೋಷಿಸಲಾಗಿದೆ.

​ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಮೂಲಕ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಈ ರಜಾ ದಿನಗಳು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯವಾಗಲಿವೆ.

ಭಾನುವಾರದಂದು ಬರುವ ಪ್ರಮುಖ ಹಬ್ಬಗಳು:
​2026ರ ಪಟ್ಟಿಯಲ್ಲಿ ಮಹಾ ಶಿವರಾತ್ರಿ (ಫೆಬ್ರವರಿ 15), ಕನ್ನಡ ರಾಜ್ಯೋತ್ಸವ (ನವೆಂಬರ್ 1) ಮತ್ತು ನರಕ ಚತುರ್ದಶಿ (ನವೆಂಬರ್ 8) ಹಬ್ಬಗಳು ಭಾನುವಾರದಂದು ಬಂದಿರುವುದರಿಂದ, ಈ ದಿನಗಳಿಗೆ ಪ್ರತ್ಯೇಕ ರಜೆಯನ್ನು ಘೋಷಿಸಲಾಗಿಲ್ಲ.

ಪರಿಮಿತ ರಜಾ ದಿನಗಳು:
​ಸಾರ್ವತ್ರಿಕ ರಜೆಗಳಲ್ಲದೆ, ಸರ್ಕಾರವು 2026ನೇ ಸಾಲಿಗೆ ಒಟ್ಟು 21 ಪರಿಮಿತ ರಜಾ ದಿನಗಳ ಪಟ್ಟಿಗೂ ಅನುಮೋದನೆ ನೀಡಿದೆ. ಸರ್ಕಾರಿ ನೌಕರರು ಈ ಪಟ್ಟಿಯಿಂದ ಯಾವುದೇ ಎರಡು ದಿನಗಳನ್ನು ಆಯ್ಕೆ ಮಾಡಿಕೊಂಡು ರಜೆ ಪಡೆಯಬಹುದಾಗಿದೆ.

ಕೊಡಗು ಜಿಲ್ಲೆಗೆ ಸ್ಥಳೀಯ ರಜೆ:
​ಕೊಡಗು ಜಿಲ್ಲೆಯ ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳನ್ನು ಗಮನದಲ್ಲಿಟ್ಟುಕೊಂಡು, ಆ ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಕೆಳಕಂಡ ದಿನಗಳಂದು ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ:
ಕೈಲ್ ಮೂಹೂರ್ತ: ಸೆಪ್ಟೆಂಬರ್ 3, 2026 (ಗುರುವಾರ)
​ಹುತ್ತರಿ ಹಬ್ಬ: ನವೆಂಬರ್ 26, 2026 (ಗುರುವಾರ)

​ಮುಸಲ್ಮಾನ ಬಾಂಧವರ ಹಬ್ಬಗಳ ದಿನಾಂಕಗಳಲ್ಲಿ ಬದಲಾವಣೆಯಾದರೆ, ಸರ್ಕಾರಿ ಸೇವೆಯಲ್ಲಿರುವವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜೆ ಮಂಜೂರು ಮಾಡಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Shorts Shorts