ಗದಗ : ಆಸ್ತಿ ಮತ್ತು ಹಣಕಾಸಿನ ವಿಚಾರಕ್ಕಾಗಿ ಪತ್ನಿಯೊಬ್ಬಳು ತನ್ನ ಗಂಡನನ್ನೇ ಸುಮಾರು 15 ದಿನಗಳಿಂದ ತಗಡಿನ ರೂಂನಲ್ಲಿ ಕೂಡಿ ಹಾಕಿ ಗೃಹಬಂಧನದಲ್ಲಿ ಇಟ್ಟಿರುವ ಗಂಭೀರ ಆರೋಪ ಗದಗ ಜಿಲ್ಲೆಯ ಬೆಟಗೇರಿಯ ಕಲಬುರ್ಗಿ ಓಣಿಯಲ್ಲಿ ಬೆಳಕಿಗೆ ಬಂದಿದೆ.
ಗಜಾನನಸಾ ಬಸವಾ (54) (Gajananasa Basava) ಎಂಬುವವರನ್ನು ಅವರ ಪತ್ನಿ ಶೋಭಾ (Shobha)ಅವರು ಕಳೆದ 15 ದಿನಗಳಿಂದ ಮನೆಯ ಒಳಗಿನ ತಗಡಿನ ರೂಂನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದರು. ನಿತ್ಯಕರ್ಮಗಳಿಗೂ ಸಹ ಹೊರಗೆ ಬಿಡದೆ ಕ್ರೂರವಾಗಿ ನಡೆಸಿಕೊಂಡಿದ್ದಾರೆ ಎಂದು ಗಜಾನನಸಾ ದೂರಿದ್ದಾರೆ.
ಪತಿ ಗಜಾನನಸಾ ಹೆಸರಿನಲ್ಲಿ ಆಸ್ತಿ ಮತ್ತು ಪ್ಲಾಟ್ (property and plots) ಗಳಿದ್ದು, ಈ ಆಸ್ತಿಗಾಗಿ ಪತ್ನಿ ಶೋಭಾ ಈ ರೀತಿ ವರ್ತಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಗಂಡನನ್ನು ಕೂಡಿ ಹಾಕಿದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು, ಬೀಗ ತೆಗೆಸಿ ಗಜಾನನಸಾ ಅವರನ್ನು ಬಂಧಮುಕ್ತಗೊಳಿಸಿದರು.
ಪೊಲೀಸರ ವಿಚಾರಣೆ (Police Intervention) ವೇಳೆ ಪತ್ನಿ ಶೋಭಾ ಈ ಆರೋಪಗಳನ್ನು ನಿರಾಕರಿಸಿದ್ದು, ನಾವು ಅವರನ್ನು ಕೂಡಿ ಹಾಕಿಲ್ಲ. ಅವರು ಮಾನಸಿಕ ಅಸ್ವಸ್ಥ(Mentally unstable)ರಾಗಿರುವ ಕಾರಣ ಮನೆಯೊಳಗೆ ಇಟ್ಟಿದ್ದೇವೆ. ಪತಿ ಗಜಾನನಸಾ ಅವರು ತಮ್ಮ ಆಸ್ತಿ ಮತ್ತು ಎಲ್ಲ ಹಣವನ್ನು ಸಹೋದರಿಗೆ ಕೊಡುತ್ತಿದ್ದಾರೆ. ಹೀಗಾಗಿ ಅವರನ್ನು ಹೊರಗೆ ಹೋಗದಂತೆ ಮನೆಯಲ್ಲಿ ಇಟ್ಟಿದ್ದೇವೆವ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ, ಪತ್ನಿ ಮತ್ತು ಅವರ ಮನೆಯವರು ಮಾಧ್ಯಮ (Media) ಹಾಗೂ ಪೊಲೀಸರ (Police) ವಿರುದ್ಧವೇ ಆವಾಜ್ ಹಾಕುತ್ತಿರುವುದು ಕಂಡುಬಂದಿದೆ. ಈ ಹಿಂದೆ ಕೂಡ ಗಜಾನನಸಾ ಅವರನ್ನು ಮನೆಯಿಂದ ಹೊರ ಹಾಕಿದ್ದ ಆರೋಪ ಇವರ ಮೇಲಿದೆ.






