Home State Politics National More
STATE NEWS

ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ: Ethanol ತುಂಬಿದ್ದ ಲಾರಿ ಬೆಂಕಿಗಾಹುತಿ!

Ethanol tanker burnt in a highway by accident
Posted By: Sagaradventure
Updated on: Nov 15, 2025 | 2:34 AM

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎಥನಾಲ್ ತುಂಬಿಕೊಂಡು ಚಿಕ್ಕೋಡಿಯಿಂದ ಕೇರಳ ಕಡೆಗೆ ಸಾಗುತ್ತಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಿಯಂತ್ರಣ ಕಳೆದುಕೊಂಡು ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಎಥನಾಲ್ ತುಂಬಿದ್ದ ಟ್ಯಾಂಕರ್ ಲಾರಿಯು ಅರಬೈಲ್ ಘಟ್ಟದಲ್ಲಿ ಬರುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಲೈಟ್ ಕಂಬಕ್ಕೆ ಅತಿ ವೇಗವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಎಥನಾಲ್ ತುಂಬಿದ್ದ ಕಾರಣ ಡಿಕ್ಕಿಯಾದ ಕೆಲವೇ ಕ್ಷಣಗಳಲ್ಲಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೆದ್ದಾರಿ ಮಧ್ಯದಲ್ಲಿಯೇ ಇಡೀ ಲಾರಿಯನ್ನು ಆವರಿಸಿಕೊಂಡಿತು. ಭಾರಿ ಬೆಂಕಿಯ ಜ್ವಾಲೆಯಿಂದಾಗಿ ಲಾರಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಅದೃಷ್ಟವಶಾತ್, ಲಾರಿಯ ಚಾಲಕ ತಕ್ಷಣವೇ ವಾಹನದಿಂದ ಹೊರಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಹೆದ್ದಾರಿ ಮಧ್ಯದಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎರಡೂ ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿ ಅಸ್ತವ್ಯಸ್ತವಾಯಿತು.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಬಳಿಕ ಹೆದ್ದಾರಿಯಲ್ಲಿ ಸಂಚಾರವನ್ನು ಪುನರಾರಂಭಗೊಂಡಿದೆ. ಈ ಘಟನೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Shorts Shorts