ಬೆಂಗಳೂರು: ನಗರದ ಸ್ಯಾಂಕಿ ಕೆರೆ ಬಳಿ ಟನಲ್ ರಸ್ತೆ ಕಾಮಗಾರಿ (Tunnel road project) ಯ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್. ಅಶೋಕ್ (R. Ashoka) ಅವರು, ಸರ್ಕಾರದ ಈ ಕ್ರಮವು ಅವೈಜ್ಞಾನಿಕ (Unscientific) ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಯಾಂಕಿ ಕೆರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿ ಕಾಮಗಾರಿಗಳಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ, ಆದರೆ ಈ ಸರ್ಕಾರ ಆತುರಾತುರವಾಗಿ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿಗೆ ಮುಂದಾಗಿದೆ ಎಂದು ಟೀಕಿಸಿದರು.
ಟನಲ್ ರೋಡ್ ಮಾಡಲು ಸರ್ಕಾರಕ್ಕೆ ವರದಿ ಕೊಟ್ಟಿದ್ದು ಯಾರು? ಆತುರಾತುರವಾಗಿ ಇಂತಹ ದೊಡ್ಡ ಪ್ರಾಜೆಕ್ಟ್ ಮಾಡುವುದು ಎಷ್ಟರಮಟ್ಟಿಗೆ ಸರಿ?
ಕೆಂಪೇಗೌಡ ಕಟ್ಟಿದ್ದ ಜಾಗಗಳನ್ನೇ ಡಿಕೆಶಿ (D.K. Shivakumar) ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಲಾಲ್‌ಬಾಗ್ (Lalbagh) ಆಯ್ತು, ಈಗ ಸ್ಯಾಂಕಿ ಕೆರೆಯ (Sankey Tank) ಸರದಿ. ಸ್ಯಾಂಕಿ ಕೆರೆ ಈ ಹಿಂದೆ ಗಂಧದ ಕೆರೆ (Sandalwood Lake) ಎಂಬ ಹೆಸರಿನಿಂದ ಇತ್ತು. ಕೆರೆಯ ಜಾಗವನ್ನು ಮತ್ತು ಪಾರ್ಕ್ ಜಾಗವನ್ನು ಕಬಳಿಸಲು ಈ ಹುನ್ನಾರ ಮಾಡಲಾಗುತ್ತಿದೆ ಎಂದು ನೇರವಾಗಿ ಆರೋಪ ಮಾಡಿದರು.
ಯಾವುದೇ ತಜ್ಞರನ್ನು ನೇಮಕ ಮಾಡಿಕೊಳ್ಳದೇ ಇಂತಹ ದೊಡ್ಡ ಪ್ರಾಜೆಕ್ಟ್ ಮಾಡುವುದು ಸರಿಯಲ್ಲ. ನಾವು ಅಭಿವೃದ್ಧಿಗೆ ವಿರೋಧವಿಲ್ಲ, ಸಹಕಾರ ನೀಡುತ್ತೇವೆ. ಆದರೆ, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.






