ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಹುಂಡೈ ಐ20 ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಹೊಸ ವಿವರಗಳು ಹೊರಬಿದ್ದಿವೆ. ಈ ಭಯೋತ್ಪಾದಕ ಕೃತ್ಯದ ಪ್ರಮುಖ ಆರೋಪಿಯಾಗಿರುವ ಡಾ. ಮೊಹಮ್ಮದ್ ಉಮರ್ ಉನ್-ನಬಿ, ಸ್ಫೋಟ ಸಂಭವಿಸುವ ಹಿಂದಿನ ದಿನದವರೆಗೆ ಹರಿಯಾಣದ ನೂಹ್ ನಲ್ಲಿ ಬಾಡಿಗೆ ಕೊಠಡಿಯಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಹನ್ನೆರಡು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಉಮರ್ ಉನ್-ನಬಿ “ವೈಟ್ ಕಾಲರ್ ಟೆರರ್ ಗ್ರೂಪ್”ನ ಭಾಗವಾಗಿದ್ದ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಡಾ. ಮೊಹಮ್ಮದ್ ಉಮರ್ ಉನ್-ನಬಿ, ತನ್ನ ಸಹಚರ ಡಾ. ಮುಜಮ್ಮಿಲ್ ಶಕೀಲ್ ಗಾನಿಯೆ ಬಂಧನಕ್ಕೊಳಗಾದ ಕೂಡಲೇ ಫರೀದಾಬಾದ್‌ನ ಅಲ್-ಫಲಾಹ್ ಮೆಡಿಕಲ್ ಕಾಲೇಜಿನಿಂದ ಪರಾರಿಯಾಗಿದ್ದ. ಅಕ್ಟೋಬರ್ 30 ರಂದು ನರ್ಸಿಂಗ್ ಸಿಬ್ಬಂದಿ ಶೋಭಾ ಖಾನ್ ಸಹಾಯದಿಂದ ಆತ ನೂಹ್‌ಗೆ ತೆರಳಿದ್ದ. ಅಲ್ಲಿ, ಶೋಭಾ ಖಾನ್ ಅವರ ಅತ್ತಿಗೆ ಅಫ್ಸಾನಾ ಅವರ ಮನೆಯ ನಾಲ್ಕು ಕೊಠಡಿಗಳಲ್ಲಿ ಒಂದನ್ನು ತಿಂಗಳ ಬಾಡಿಗೆ ₹2,000 ಮತ್ತು ಭದ್ರತಾ ಠೇವಣಿ ₹4,000 ಸೇರಿ ಒಟ್ಟು ₹6,000ಕ್ಕೆ ಬಾಡಿಗೆಗೆ ಪಡೆದಿದ್ದ.
ಆರೋಪಿಯ ಈ 11 ದಿನಗಳ ವಾಸ್ತವ್ಯದ ಬಗ್ಗೆ ಅಫ್ಸಾನಾ ಅವರ ಮಗಳು ಮಹತ್ವದ ಮಾಹಿತಿ ನೀಡಿದ್ದಾಳೆ. ಉಮರ್ ದಿನವಿಡೀ ಕೊಠಡಿಯಿಂದ ಹೊರಬರುತ್ತಿರಲಿಲ್ಲ. ಆತ ಸಾಯಂಕಾಲ ಕತ್ತಲಾದ ನಂತರವಷ್ಟೇ ಹೊರಗೆ ಹೋಗುತ್ತಿದ್ದ, ಮುಖ್ಯವಾಗಿ ರಸ್ತೆಯ ಬದಿಯ ತಿಂಡಿ ತಿನಿಸುಗಳನ್ನು ಸೇವಿಸಲು ಬರುತ್ತಿದ್ದ ಎಂದು ಆಕೆ ಹೇಳಿದ್ದಾರೆ. ಆತ ಅತ್ಯಂತ ಗಂಭೀರನಾಗಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಮತ್ತು ಈ ಹನ್ನೊಂದು ದಿನಗಳ ಕಾಲ ಒಂದೇ ಬಟ್ಟೆಯಲ್ಲಿ ಉಳಿದುಕೊಂಡಿದ್ದ. ನವೆಂಬರ್ 9ರ ರಾತ್ರಿ ಆತ ಇದ್ದಕ್ಕಿದ್ದಂತೆ ಅಲ್ಲಿಂದ ಹೊರಟುಹೋದ, ನಂತರ ಕೊಠಡಿಯು ದುರ್ವಾಸನೆಯಿಂದ ಕೂಡಿತ್ತು ಎಂದು ಕುಟುಂಬ ಸದಸ್ಯರು ವಿವರಿಸಿದ್ದಾರೆ.
ದೆಹಲಿ ಪೊಲೀಸರ ತನಿಖೆಯ ಪ್ರಕಾರ, ಸ್ಫೋಟದ ಸುಮಾರು ಹನ್ನೊಂದು ದಿನಗಳ ಮೊದಲು, ಉಮರ್ ಉನ್-ನಬಿ ಫರೀದಾಬಾದ್‌ನ ಮೊಬೈಲ್ ಅಂಗಡಿಯೊಂದರಲ್ಲಿ ಕನಿಷ್ಠ ಎರಡು ಮೊಬೈಲ್‌ಗಳನ್ನು ರಿಪೇರಿ ಮಾಡಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಆದರೆ, ಪ್ರಮುಖ ಅಂಶವೆಂದರೆ ಸ್ಫೋಟಗೊಂಡ ಐ20 ಕಾರಿನ ವಿಧಿವಿಜ್ಞಾನ ತನಿಖೆಯಲ್ಲಿ ಯಾವುದೇ ಮೊಬೈಲ್ ಪತ್ತೆಯಾಗಿಲ್ಲ. ಇದರಿಂದ, ಆರೋಪಿಯು ಸ್ಫೋಟದ ಮೊದಲು ತನ್ನ ಬಳಿಯಿದ್ದ ಎಲ್ಲಾ ಮೊಬೈಲ್‌ಗಳನ್ನು ನಾಶಪಡಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.






