ಬೆಂಗಳೂರು: ರಾಜ್ಯ ಸಚಿವ ಸಂಪುಟವು ಬೆಂಗಳೂರು ನಗರದಲ್ಲಿ ರಸ್ತೆ ಸ್ವಚ್ಛತೆಗಾಗಿ 46 ಸ್ವೀಪಿಂಗ್ ಯಂತ್ರಗಳನ್ನು 7 ವರ್ಷಗಳ ಅವಧಿಗೆ ಬಾಡಿಗೆ ಆಧಾರದ ಮೇಲೆ ಪಡೆಯಲು ₹613.25 ಕೋಟಿಗಳ ಬೃಹತ್ ಮೊತ್ತವನ್ನು ಅನುಮೋದಿಸಿದೆ. ಈ ನಿರ್ಧಾರವು ರಾಜ್ಯಾದ್ಯಂತ ಗಂಭೀರ ಪ್ರಶ್ನೆಗಳನ್ನು ಮತ್ತು ಆರ್ಥಿಕ ಲೆಕ್ಕಾಚಾರಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
ಒಪ್ಪಂದದ ಪ್ರಕಾರ, 7 ವರ್ಷಗಳ ಅವಧಿಗೆ ಬೆಂಗಳೂರು ನಗರವು ಪ್ರತಿ ಯಂತ್ರಕ್ಕೆ ಸರಾಸರಿ ₹13.32 ಕೋಟಿ ಪಾವತಿಸಲಿದೆ. ಅಂದರೆ, ಪ್ರತಿ ಯಂತ್ರದ ವಾರ್ಷಿಕ ವೆಚ್ಚ ಅಂದಾಜು ₹1 ಕೋಟಿಗೂ ಹೆಚ್ಚಾಗಿದೆ.
ಸರ್ಕಾರವು ಅನುಮೋದಿಸಿರುವ ಈ ಬೃಹತ್ ವೆಚ್ಚಕ್ಕೆ ಹೋಲಿಸಿದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದೇ ಮಾದರಿಯ ಯಂತ್ರಗಳಾದ KV 1600, RSR 6000, ಮತ್ತು Nilfisk ROS1300 ಗಳನ್ನು ಖರೀದಿಸಲು ತಗಲುವ ನಿಜವಾದ ಬೆಲೆ ತೀರಾ ಕಡಿಮೆ ಇದೆ. ಈ ಯಂತ್ರಗಳ ಬೆಲೆ $15,000 ದಿಂದ $20,000 (ಸುಮಾರು ₹13 ಲಕ್ಷದಿಂದ ₹17.8 ಲಕ್ಷ) ಎಂದು ಅಂದಾಜಿಸಲಾಗಿದೆ.
46 ಯಂತ್ರಗಳನ್ನು ಗರಿಷ್ಠ $20,000 ದರದಲ್ಲಿ (₹89 ವಿನಿಮಯ ದರದಲ್ಲಿ) ಖರೀದಿಸಿದರೆ, ಒಟ್ಟು ಖರೀದಿ ವೆಚ್ಚ ಕೇವಲ ₹8.2 ಕೋಟಿ ಆಗುತ್ತದೆ. ಯಂತ್ರಗಳ ಬೆಲೆಯನ್ನು ಅತಿ ಹೆಚ್ಚು ಅಂದರೆ $50,000ಕ್ಕೆ ನಿಗದಿಪಡಿಸಿದರೂ ಸಹ, 46 ಯಂತ್ರಗಳನ್ನು ಕೊಳ್ಳಲು ಕೇವಲ ₹20 ಕೋಟಿ ವೆಚ್ಚವಾಗುತ್ತದೆ. ಈ ಎಲ್ಲಾ ಲೆಕ್ಕಾಚಾರಗಳನ್ನೂ ಮೀರಿ, ಸರ್ಕಾರವು ಗುತ್ತಿಗೆ ರೂಪದಲ್ಲಿ ₹613 ಕೋಟಿ ವೆಚ್ಚ ಮಾಡಲು ಮುಂದಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.
ಈ ವ್ಯತ್ಯಾಸದ ಕುರಿತು ಸರ್ಕಾರ ಹೇಳುವಂತೆ, “ತಾಂತ್ರಿಕ ಸಮಿತಿಯು ಪ್ರತಿ ಯಂತ್ರದ ವೆಚ್ಚವು ಬಿಡಿಭಾಗಗಳು ಮತ್ತು ವಾರ್ಷಿಕ ನಿರ್ವಹಣಾ ಒಪ್ಪಂದ(AMC) ಸೇರಿ ₹3 ಕೋಟಿ ಆಗುತ್ತದೆ ಎಂದು ಅಂದಾಜಿಸಿತ್ತು. ಆದರೂ, ಆರಂಭದಲ್ಲಿ ಬಂಡವಾಳದ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಗುತ್ತಿಗೆ ವಿಧಾನವನ್ನು ಆಯ್ಕೆ ಮಾಡಲಾಗಿದೆ.”
ಆದರೆ, ಸ್ವತಃ ತಾಂತ್ರಿಕ ಸಮಿತಿಯ ₹3 ಕೋಟಿ ಅಂದಾಜಿಗೂ, 7 ವರ್ಷಗಳಲ್ಲಿ ಪ್ರತಿ ಯಂತ್ರಕ್ಕೆ ತಗಲಲಿರುವ ₹13.32 ಕೋಟಿ ವೆಚ್ಚಕ್ಕೂ ಹೋಲಿಕೆಯಿಲ್ಲ. ಸರ್ಕಾರದ ಪ್ರಕಾರ, ಗುತ್ತಿಗೆ ವಿಧಾನವು ಕೊಳ್ಳುವಿಕೆಗಿಂತ ಪ್ರತಿ ಯಂತ್ರಕ್ಕೆ ₹50 ಲಕ್ಷ ಅಧಿಕ ವೆಚ್ಚ ತರುತ್ತದೆ ಎಂದು ತಿಳಿದಿದ್ದರೂ ಈ ಆಯ್ಕೆಯನ್ನು ಮಾಡಲಾಗಿದೆ.
46 ಸ್ವೀಪಿಂಗ್ ಯಂತ್ರಗಳ ಗುತ್ತಿಗೆ ವೆಚ್ಚವು ಅವುಗಳನ್ನು ಖರೀದಿಸಿ, ಹೆಚ್ಚಿನ ನಿರ್ವಹಣಾ ಮತ್ತು ಕಾರ್ಯಾಚರಣಾ ವೆಚ್ಚವನ್ನು ಸೇರಿಸಿದರೂ ಸಹ, ಅಂದಾಜು ಖರೀದಿ ಬೆಲೆಗಿಂತಲೂ ಅತಿ ಹೆಚ್ಚು ಇದೆ. ಇಷ್ಟು ದೊಡ್ಡ ಮೊತ್ತದ ವ್ಯತ್ಯಾಸದ ಕುರಿತು ಸಾರ್ವಜನಿಕವಾಗಿ ಕೇಳಲಾಗುತ್ತಿರುವ ಪ್ರಶ್ನೆಗಳು ಮತ್ತು ವೆಚ್ಚದ ಹೆಚ್ಚಳದ ಆತಂಕಗಳು ನ್ಯಾಯಸಮ್ಮತವಾಗಿವೆ.
ನಿರ್ವಹಣೆ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಸೇರಿಸಿದರೂ ಸಹ, ಯಂತ್ರಗಳನ್ನು ನೇರವಾಗಿ ಖರೀದಿಸುವುದು ದೀರ್ಘಾವಧಿಯಲ್ಲಿ ಗುತ್ತಿಗೆಗಿಂತ ಗಣನೀಯವಾಗಿ ಅಗ್ಗವಾಗಿತ್ತು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ.
ಯಂತ್ರಗಳ ಗುತ್ತಿಗೆ: ಎಕ್ಸ್‌ನಲ್ಲಿ ಬಿಜೆಪಿ ಕಿಡಿ
ಈ ಬೃಹತ್ ಗುತ್ತಿಗೆ ನಿರ್ಧಾರದ ಬೆನ್ನಲ್ಲೇ, ವಿರೋಧ ಪಕ್ಷವಾದ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದಿನಕ್ಕೊಂದು ಲೂಟಿ ನಡೆಯುತ್ತಿದೆ. ಈಗ ಕಸ ಗುಡಿಸುವ ಯಂತ್ರಗಳ ಹೆಸರಿನಲ್ಲಿ ₹613 ಕೋಟಿ ಲೂಟಿ ಮಾಡುತ್ತಿದೆ,” ಎಂದು ಗಂಭೀರವಾಗಿ ಆರೋಪಿಸಿದೆ. ಅಲ್ಲದೆ, “ಈ ಭ್ರಷ್ಟ ಸರ್ಕಾರಕ್ಕೆ ರಾಜ್ಯದ ಜನತೆ ಖಂಡಿತವಾಗಿಯೂ ಬುದ್ಧಿ ಕಲಿಸುವುದು ಖಚಿತ,” ಎಂದು ಎಚ್ಚರಿಸಿ, ಕೂಡಲೇ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದೆ.






