ಉತ್ತರಕನ್ನಡ ಜಿಲ್ಲೆಯ ಭಟ್ಕಳ ನಗರದ ಪ್ರಮುಖ ಪ್ರದೇಶದಲ್ಲಿ ಗೋವು ಕಳ್ಳತನದ ಘಟನೆಯೊಂದು ವರದಿಯಾಗಿದ್ದು, ಕಳ್ಳರು ಯಾವುದೇ ಭಯವಿಲ್ಲದೆ ಕಾರಿನಲ್ಲಿ ಬಂದು ರಾಜಾರೋಷವಾಗಿ ಈ ಕೃತ್ಯ ಎಸಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಶನಿವಾರ(ನ.15ರ) ಬೆಳಗಿನ ಜಾವ 3:15ರ ಸುಮಾರಿಗೆ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಪಕ್ಕದ ಆವರಣದಲ್ಲಿ ನಿಲ್ಲಿಸಿದ್ದ ಗೋವನ್ನು ಕಳ್ಳರು ಅಪಹರಿಸಿದ್ದು, ಈ ಸಂಪೂರ್ಣ ಕೃತ್ಯದ ವಿಡಿಯೋ ದೃಶ್ಯಾವಳಿಗಳು ಲಭ್ಯವಾಗಿವೆ.
ನಗರದ ಮುಖ್ಯಭಾಗದಲ್ಲಿ, ದೇವಸ್ಥಾನದ ಪಕ್ಕದಲ್ಲಿ ಇಷ್ಟೊಂದು ಸುಲಭವಾಗಿ ಗೋವು ಕಳ್ಳತನ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಗೋವು ಕಳ್ಳತನ ಮಾಡುವವರಿಗೆ ಕಾನೂನಿನ ಯಾವುದೇ ಭಯವಿಲ್ಲದಿರುವುದು ಇದರಿಂದ ಸ್ಪಷ್ಟವಾಗಿದೆ. ಇಂತಹ ಅಪರಾಧಿಗಳ ಮೇಲೆ ಕೇವಲ ಮೊಕದ್ದಮೆಗಳನ್ನು ದಾಖಲಿಸಿ ಪ್ರಯೋಜನವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗೋವು ಕಳ್ಳತನದಲ್ಲಿ ತೊಡಗುವವರು ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ಅಪರಾಧ ಕೃತ್ಯಗಳನ್ನು ಮುಂದುವರಿಸುತ್ತಾರೆ. ಈ ನಿರಂತರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಆರೋಪಿಗಳಿಗೆ ಪೊಲೀಸರಿಂದ ಉತ್ತರ ಪ್ರದೇಶದ ಮಾದರಿಯಲ್ಲಿ “ಥರ್ಡ್ ಡಿಗ್ರಿಯ ಟ್ರೀಟ್‌ಮೆಂಟ್” ನೀಡುವ ಅವಶ್ಯಕತೆಯಿದೆ ಎಂದು ಶ್ರೀಕಾಂತ ನಾಯ್ಕ ಅವರು ಒತ್ತಾಯಿಸಿದ್ದಾರೆ.






